ಲಂಡನ್: ಮದ್ಯೋದ್ಯಮಿ ವಿಜಯ್ ಮಲ್ಯ ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಇಂಗ್ಲೆಂಡ್ (ಯುಕೆ) ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಲು ಇಲ್ಲಿನ ಹೈಕೋರ್ಟ್ ಅವಕಾಶ ಕಲ್ಪಿಸಲಿಲ್ಲ.
ಕಳೆದ ತಿಂಗಳಷ್ಟೇ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಆದೇಶದ ವಿರುದ್ಧದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಇಂದು ಲಂಡನ್ ನ್ಯಾಯಾಲಯದಲ್ಲಿ ಉದ್ಯಮಿಗೆ ಮತ್ತೊಂದು ಹಿನ್ನಡೆಯಾಗಿದೆ. ಯುಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಆಸೆಯಲ್ಲಿದ್ದ ಅವರಿಗೆ ನಿರಾಶೆಯಾಗಿದೆ. ಇದರಿಂದಾಗಿ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸೋದು ಬಹುತೇಕ ಖಚಿತವಾದಂತಿದೆ.
ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಇಂಗ್ಲೆಂಡ್ ವ್ಯವಸ್ಥೆಯು ಸ್ವಲ್ಪ ವಿಭಿನ್ನವಾಗಿದೆ. ಮಲ್ಯ ಅವರು ಮತ್ತೆ ಹೈಕೋರ್ಟ್ ಮೂಲಕವೇ ಉನ್ನತ ನ್ಯಾಯಾಲಯದ ಕದ ತಟ್ಟಬೇಕಿದೆ. ಸುಪ್ರೀಂಗೆ ಏಕೆ ಸಂಪರ್ಕಿಸಬೇಕು? ಅವಶ್ಯಕತೆ ಏನಿದೆ? ಎಂಬುದನ್ನು ಮಲ್ಯ ಹೈಕೋರ್ಟ್ಗೆ ಮನವರಿಕೆ ಮಾಡಬೇಕು.
ಸ್ಥಗಿತಗೊಂಡ ಕಿಂಗ್ಫಿಶರ್ ವಾಯುಯಾನ ಸಂಸ್ಥೆಗೆ ಸಂಬಂಧಿಸಿದಂತೆ ವಂಚನೆ ಹಾಗೂ ಬಹಿರಂಗಪಡಿಸದ ಸಾಲಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪವನ್ನು ಮಲ್ಯ ಎದುರಿಸುತ್ತಿದ್ದಾರೆ. ಏಪ್ರಿಲ್ 20ರಂದು ಹೈಕೋರ್ಟ್ ತೀರ್ಪಿನ ಮೇಲೆ ಉನ್ನತ ನ್ಯಾಯಾಲಯ ಸಂಪರ್ಕಿಸಲು ಅನುಮತಿಗಾಗಿ ಅವರು ಈ ಅರ್ಜಿ ಸಲ್ಲಿಕೆ ಮಾಡಿದ್ದರು.
ಇಂಗ್ಲೆಂಡ್ ಗೃಹ ಕಾರ್ಯದರ್ಶಿ ಪ್ರಮಾಣೀಕರಿಸಿದ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ನ ಹಸ್ತಾಂತರ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಯಾವುದೇ ಸಮಯದಲ್ಲಿ ತಾನು ಇಂಗ್ಲೆಂಡ್‍ನಿಂದ ಭಾರತಕ್ಕೆ ಗಡಿಪಾರು ಆಗುವ ಭೀತಿಯಿಂದಾಗಿ ಹೊಸ ಕಾನೂನು ಸಮರಕ್ಕೆ ಮದ್ಯದ ದೊರೆ ಮಲ್ಯ ಸಜ್ಜಾಗುತ್ತಿದ್ದಾರೆ. ಭಾರತಕ್ಕೆ ಹಸ್ತಾಂತರ ಮಾಡುವುದನ್ನು ಪ್ರಶ್ನಿಸಿ 2018ರಲ್ಲಿ ಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು.