ಬೆಂಗಳೂರು: ಕಾಫಿ ಡೇ ಗ್ಲೋಬಲ್ ಅಧ್ಯಕ್ಷ ವಿ.ಜಿ. ಸಿದ್ಧಾರ್ಥ್ ಅವರ ನಿಧನದಿಂದ ಭಾರತದ ಕಾಫಿ ಉದ್ಯಮ ಕ್ಷೇತ್ರಕ್ಕೆ ದೊಡ್ಡ ನಷ್ಟತಂದಿದೆ ಎಂದು ಉದ್ಯಮಿ ವಲಯದ ತಜ್ಞರು ವಿಷಾದ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕಾಫಿಯನ್ನು ಮುಂಚೂಣಿಗೆ ತಂದ ಮೊದಲ ಭಾರತೀಯ ಸಿದ್ಧಾರ್ಥ್. ಯುವ ಉದ್ಯಮಿದಾರರಿಗೆ ಸ್ಪೂರ್ತಿ ಆಗಿದ್ದ ಅವರು, ಭಾರತೀಯರ ಚಹಾ ಕುಡಿಯುವ ಸಂಪ್ರದಾಯವನ್ನು ಬದಲಾಯಿಸಿದವರು. ಕಾಫಿ ಉದ್ಯಮ ಒಬ್ಬ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡು ಬಡವಾಗಿದೆ ಎಂದು ಕಾಫಿ ಸಂಘಟನೆ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಉದಾರೀಕರಣದ ನಂತರದ ದಿನಗಳಲ್ಲಿ ಕರ್ನಾಟಕದ ಕಾಫಿ ಉದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು. ತೊಂಬತ್ತರ ದಶಕದ ಮಧ್ಯಭಾಗದಲ್ಲಿ ಕಾಫಿ ಒಂದು ನಿಯಂತ್ರಿತ ಸರಕು ಆಗಿತ್ತು. ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಬಳಿ ಕಾಫಿ ಬೆಳೆಗಾರರ ನಿಯೋಗ ಕರೆದೊಯ್ದು, ಕಾಫಿಯನ್ನು ನಿಯಂತ್ರಿತ ಮಾರುಕಟ್ಟೆಯಿಂದ ಮುಕ್ತಗೊಳಿಸುವಂತೆ ಕೋರಿ, ಪ್ರಧಾನಿಗಳ ಮನವೊಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಕಾಫಿ ಒಕ್ಕೂಟದ ಬೆಳೆಗಾರರು ಸ್ಮರಿಸಿದ್ದಾರೆ.
ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿನ ಅನೇಕ ಬೆಳೆಗಾರರು ಮತ್ತು ಕುಟುಂಬಗಳು ಅವರಿಂದ ಪ್ರಯೋಜನ ಪಡೆದಿದ್ದಾರೆ. 1995ರಲ್ಲಿ ಸಿದ್ಧಾರ್ಥ್ ಆರಂಭಿಸಿದ ಅಮಲ್ಗಮೇಟೆಡ್ ಬೀನ್ ಕಂಪನಿಗೆ (ಎಬಿಸಿ) ಸಾವಿರಾರು ಸಣ್ಣ- ಸಣ್ಣ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಮಾರುತ್ತಿದ್ದರು. ಅವರು ಬೆಳಗಾರರಿಗೆ ದಾರಿದೀಪವಾಗಿದ್ದರು ಎಂದು ಈ ಭಾಗದ ಕಾಫಿ ಬೆಳೆಗಾರರು ಸ್ಮರಿಸುತ್ತಾರೆ.