ನವದೆಹಲಿ: ಚೀನಾದೊಂದಿಗಿನ ಗಡಿ ಉದ್ವಿಗ್ನತೆ ಮತ್ತು ಚೀನಾದ ಸರಕುಗಳನ್ನು ಬಹಿಷ್ಕರಿಸುವ ಘೋಷಣೆಗಳ ಮಧ್ಯೆ, ಶಿಯೋಮಿ ಮತ್ತು ರಿಯಲ್ಮಿ ನಂತಹ ಜನಪ್ರಿಯ ಫೋನ್ ಬ್ರಾಂಡ್‌ಗಳ ಭಾರತೀಯ ಅಧಿಕಾರಿಗಳು ನೂತನ ಉತ್ಪನ್ನಗಳ ಬಿಡುಗಡೆ ಮುಂದೂಡುವುದಾಗಿ ಘೋಷಿಸಿದ್ದಾರೆ. ಇವರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ಗೆ ತುತ್ತಾಗಿದೆ.
ನೂತನ ಮಿ ನೋಟ್‌ಬುಕ್ ಮುಂದಿನ ಮಾರಾಟದ ದಿನಾಂಕ ಘೋಷಿಸಿ, ಶಿಯೋಮಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್ ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ.
ಅನೇಕ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ "ಚೀನಿ ಸರಕುಗಳನ್ನು ಬಹಿಷ್ಕರಿಸಿ" ಎಂದು ಬರೆದಿದ್ದಾರೆ. ಒಬ್ಬ ಬಳಕೆದಾರ, ''ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ಅನಗತ್ಯ ಗಮನ ಸೆಳೆಯುವುದನ್ನು ತಪ್ಪಿಸಲು ಸ್ವಲ್ಪ ಸಮಯದವರೆಗೆ ಮೌನವಾಗಿ'' ಎಂದು ಜೈನ್‌ಗೆ ಸಲಹೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಿಯಲ್ಮಿ ಇಂಡಿಯಾ ಸಿಇಒ ಮಾಧವ್ ಶೆತ್ ಅವರು, ಗುರುವಾರ ಇದೇ ರೀತಿಯ ಪ್ರತಿಕ್ರಿಯೆಯನ್ನು ಎದುರಿಸಬೇಕಾಯಿತು. ಹಲವು ಟ್ವಿಟರ್ ಬಳಕೆದಾರರು ಚೀನಾದ ಸರಕುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ಭಾರತದಲ್ಲಿ ಮುಂಬರುವ ರಿಯಲ್ಮಿ ಎಕ್ಸ್ 3 ಮತ್ತು ರಿಯಲ್ಮಿ ಎಕ್ಸ್ 3 ಸೂಪರ್ ಝೂಮ್ ಸ್ಮಾರ್ಟ್ಫೋನ್ಗಳು ಜೂನ್ 25ರಂದು ಬಿಡುಗಡೆ ಆಗಲಿದೆ ಎಂದು ಟ್ವೀಟ್ ಮಾಡಿದ್ದರು.
ನೀವು ಚೀನಿ ಬ್ರ್ಯಾಂಡ್. ಚೀನಾದ ಸೈನ್ಯದೊಂದಿಗಿನ ಪ್ರಸ್ತುತ ಸಮಸ್ಯೆಯ ಬಳಿಕ ನಾನು ರಿಯಲ್ಮಿ, ರೆಡ್ಮಿ, ಒಪ್ಪೊ, ವಿವೊದಂತಹ ಚೀನಿ ಬ್ರಾಂಡ್‌ಗಳಿಂದ ಯಾವುದೇ ಸ್ಮಾರ್ಟ್‌ಫೋನ್ ಖರೀದಿಸಲು ಹೋಗುವುದಿಲ್ಲ. ಕೆಲವು ವೈಶಿಷ್ಟ್ಯಗಳ ಜತೆ ನಾನು ರಾಜಿ ಮಾಡಿಕೊಳ್ಳಬೇಕಾದರೆ ಸ್ಯಾಮ್‌ಸಂಗ್ ಆರಿಸಿಕೊಳ್ಳುತ್ತೇನೆ ಎಂದು ಟ್ವಿಟರ್ ಬಳಕೆದಾರ ಅಕ್ಷತ್ ಶುಕ್ಲಾ ಕಾಮೆಂಟ್ ಮಾಡಿದ್ದಾರೆ.
ಪ್ರಸ್ತುತ ಗಂಭೀರ ಪರಿಸ್ಥಿತಿಯಲ್ಲಿ ಒಪ್ಪೊ ತನ್ನ 5 ಜಿ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಲೈವ್ ಸ್ಟ್ರೀಮ್ ರದ್ದುಗೊಳಿಸಿದೆ ಎಂಬ ವರದಿಗಳು ಬಂದವು. ಇದಕ್ಕೆ ತಾಂತ್ರಿಕ ದೋಷ ಎಂದು ಕಂಪನಿ ಸ್ಪಷ್ಟನೆ ನೀಡಿದೆ.