ನಮ್ಮ ದೈಹಿಕ ಆರೋಗ್ಯದಂತೆಯೇ ಆರ್ಥಿಕ ಆರೋಗ್ಯವೂ ಉತ್ತಮವಾಗಿರಬೇಕು. ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಮುನ್ನ ಅದರ ಸಾಧಕ- ಬಾಧಕಗಳ ಬಗ್ಗೆ ಅರಿತುಕೊಂಡಿರಬೇಕು.
ನಾವು ಸರಿಯಾದ ಕ್ರಮದಲ್ಲಿ ಸಾಗುತ್ತಿದ್ದೇವೆಯೇ ಎಂಬುದನ್ನು ಆಗಾಗ ಪರಿಶೀಲಿಸಿಕೊಳ್ಳುತ್ತಿರಬೇಕು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಹಾಗಾದರೆ, ನಮ್ಮ ಆರ್ಥಿಕ ಯೋಜನೆಗಳೇನು?, ಅವುಗಳ ನಿರ್ವಹಣಾ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.
ಹಣಕಾಸಿನ ಯೋಜನೆ:
ಕೊರೊನೋತ್ತರದಲ್ಲಿ ಉದ್ದಿಮೆಗಳು ಮತ್ತು ಕೆಲಸಗಳಿಗೆ ಭಾರಿ ಹೊಡೆತ ಬಿದ್ದಿದೆ. ಇದರಿಂದ ದೇಶದ ಆರ್ಥಿಕತೆಯ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗಿದೆ. ಷೇರು ಮಾರುಕಟ್ಟೆಯೂ ಹಲವಾರು ಏರಿಳಿತ ಕಂಡಿದೆ. ಆದಾಗ್ಯೂ ಉದ್ದಿಮೆದಾರರು ಹಾಗೂ ಷೇರುದಾರರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಈ ವರ್ಷವೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹಲವಾರು ಹಣಕಾಸಿನ ಯೋಜನೆಗಳನ್ನು ರೂಪಿಸಿದ್ದಾರೆ.
ಹೂಡಿಕೆಯಲ್ಲಿ ನಿಗದಿತ ಗುರಿ ಇರಲಿ:
ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವ ಮುನ್ನ ನಮ್ಮ ಹಣ ಮತ್ತು ಆದಾಯದ ಬಗ್ಗೆ ನಿಗದಿತ ಗುರಿ ಹೊಂದಿರಬೇಕು. ಮಲ್ಟಿಕ್ಯಾಪ್ ಮತ್ತು ಫ್ಲೆಕ್ಸಿ ಕ್ಯಾಪ್ ಫಂಡ್ ಯೋಜನೆಗಳು ಹೂಡಿಕೆದಾರರಿಗೆ ಎಲ್ಲಾ ವಿಭಾಗಗಳಲ್ಲಿ (ದೊಡ್ಡ, ಮಧ್ಯಮ, ಸಣ್ಣ) ಹೆಚ್ಚಿನ ಅವಕಾಶಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಇವುಗಳಲ್ಲಿ ನಷ್ಟದ ಅಪಾಯ ಕಡಿಮೆ ಇರುತ್ತದೆ. ಇದರೊಂದಿಗೆ ಹೂಡಿಕೆದಾರರು ತಮ್ಮ ಹಣವನ್ನು ಹೆಚ್ಚಿಸುವ ಇತರ ವಿಧಾನಗಳನ್ನೂ ಅನುಸರಿಸುತ್ತಿರಬೇಕು.
ಸವಾಲು ಮತ್ತು ಸಫಲತೆ:
ಯಾವುದಾದರೂ ಕ್ಷೇತ್ರದಲ್ಲಿ ನಾವು ಹೂಡಿಕೆ ಮಾಡಿದಾಗ ಸಹಜವಾಗಿ ಸವಾಲು ಎದುರಿಸಲೇಬೇಕಾಗುತ್ತದೆ. ಇದರಿಂದಾಗಿ ಹೂಡಿಕೆ ಮಾಡುವ ಮುನ್ನವೇ ಷೇರು ಮಾರುಕಟ್ಟೆ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಇಲ್ಲವಾದಲ್ಲಿ ನಷ್ಟ ಹೊಂದಿದಾಗ ಅದನ್ನು ಸರಿದೂಗಿಸಲು ಪ್ರಯಾಸ ಪಡಬೇಕಾಗುತ್ತದೆ. ಇದರಿಂದಾಗಿ ಹೂಡಿಕೆದಾರರು ತಮ್ಮ ಅಗತ್ಯತೆ ಮತ್ತು ಹಣಕಾಸಿನ ಸಾಮರ್ಥ್ಯಕ್ಕೆ ಅನುಸಾರವಾಗಿ ಹೂಡಿಕೆಗೆ ಸಿದ್ಧರಾಗಿರಬೇಕು.
ಹೂಡಿಕೆಯಲ್ಲಿನ ಅವಕಾಶಗಳ ಬಗ್ಗೆ ಅರಿಯಿರಿ:
ದೇಶದಲ್ಲಿ ಆಕ್ರಮಣಕಾರಿ ಹೂಡಿಕೆದಾರರಿಗಿಂತ ನಿಧಾನಗತಿಯ ಪ್ರಗತಿಶೀಲರೇ ಹೆಚ್ಚಾಗಿದ್ದಾರೆ. ಇಂಥವರು ಇಟಿಎಫ್‌ಗಳು, ಫಂಡ್ ಆಫ್ ಫಂಡ್‌ಗಳು ಮತ್ತು ಇಂಡೆಕ್ಸ್ ಫಂಡ್‌ಗಳಲ್ಲಿ ಹೆಚ್ಚಾಗಿ ಹೂಡಿಕೆ ಮಾಡುತ್ತಿದ್ದಾರೆ. ಇದಕ್ಕಿಂತಲೂ ಹೆಚ್ಚಿನ ಆದಾಯ ಸಿಗುವಲ್ಲಿಯೂ ಹೂಡಿಕೆ ಮಾಡಲು ಅವಕಾಶಗಳಿರುತ್ತವೆ. ಆದರೆ, ಇವು ರಿಸ್ಕ್(ಸವಾಲು) ಒಳಗೊಂಡಿರುತ್ತವೆ.
ಹೂಡಿಕೆಯನ್ನು ಮರುಪರಿಶೀಲಿಸಿ:
ಷೇರು ಮಾರುಕಟ್ಟೆಯಲ್ಲಿ ಕಳೆದ 2 ವರ್ಷಗಳಲ್ಲಿ ಹಲವಾರು ಬದಲಾವಣೆಗಳನ್ನು ನಾವು ಕಾಣಬಹುದು. ಜನರ ಅಗತ್ಯತೆಗಳು ಮತ್ತು ಆದ್ಯತೆಗಳೂ ವಿಸ್ತರಿಸಿವೆ. ಹೊಸ ವರ್ಷದ ಆರಂಭದಲ್ಲಿ ನಮ್ಮ ಹೂಡಿಕೆಯನ್ನು ಮರುಪರಿಶೀಲಿಸುವುದು ನಮ್ಮ ಜಾಣತನಕ್ಕೆ ಬಿಟ್ಟಿದ್ದು. ಮದುವೆಗೆ, ಉನ್ನತ ಶಿಕ್ಷಣಕ್ಕೆ ಅಥವಾ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳಿಂದ ಹಣವನ್ನು ದ್ವಿಗುಣ ಮಾಡಲು ಬಯಸಿದ್ದರೆ ಈ ಎಲ್ಲದರ ನಡುವೆ ಸಮತೋಲನವನ್ನು ಸಾಧಿಸುವುದು ಮುಖ್ಯವಾದ ಸಂಗತಿ.
ಇದನ್ನೂ ಓದಿ: 'ಬುಲ್ಲಿ ಬಾಯಿ' ಆ್ಯಪ್ ಪ್ರಕರಣ; ಮುಂಬೈ ಸೈಬರ್ ಪೊಲೀಸರಿಂದ ಪ್ರಮುಖ ಆರೋಪಿ ಮಹಿಳೆ ಬಂಧನ