ಚೆನ್ನೈ: ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಚೆನ್ನೈ ನಗರವಾಸಿಗರಿಗಾಗಿ 2.5 ಮಿಲಿಯನ್ ಲೀಟರ್ ನೀರು ಹೊತ್ತ ವಿಶೇಷ ರೈಲು ತಮಿಳುನಾಡಿನ ರಾಜಧಾನಿ ತಲುಪಿದೆ.
ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಜೊಲಾರ್ಪೇಟೆ ರೈಲ್ವೆ ನಿಲ್ದಾಣದಿಂದ ನೀರು ಸಾಗಿಸುವ ವಿಶೇಷ 50 ವ್ಯಾಗನ್ ಟ್ರೈನ್ ಚೆನ್ನೈ ತಲುಪಿದೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿಶೇಷ ರೈಲಿನ ಪ್ರತಿ ವ್ಯಾಗನ್ 50,000 ಲೀ. ನೀರು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದು ಗುರುವಾರವೇ ಚೆನ್ನೈಗೆ ತಲುಪಬೇಕಿತ್ತು. ಆದರೆ, ರೈಲ್ವೆ ನಿಲ್ದಾಣಕ್ಕೆ ಟ್ಯಾಂಕ್ ಸಂಪರ್ಕಿಸುವ ಕವಾಟಗಳಲ್ಲಿನ ಸೋರಿಕೆಯಿಂದ ಒಂದು ದಿನ ತಡವಾಗಿದೆ.
ತಮಿಳುನಾಡಿನ ಕೆಲವು ನಗರಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಇಲ್ಲಿನ ಸರ್ಕಾರ ನೀರು ಸಾಗಿಸಲು ನೆರವಾಗುವಂತೆ ರೈಲ್ವೆ ಇಲಾಖೆಗೆ ಮನವಿ ಮಾಡಿಕೊಂಡಿತ್ತು. ಮನವಿಗೆ ಸ್ಪಂದಿಸಿದ ಇಂಡಿಯನ್ ರೈಲ್ವೆ ಬರದಿಂದ ತತ್ತರಿಸಿರುವ ನಗರಗಳಿಗೆ ನೀರು ಸಾಗಿಸುವ ವಿಶೇಷ ರೈಲು ಸೇವೆ ಒದಗಿಸುತ್ತಿದೆ. 2016ರಲ್ಲಿ ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲಿ ಇದೇ ರೀತಿಯ ನೀರಿನ ಅಭಾವ ಉದ್ಭವಿಸಿತ್ತು. ಆಗ 10 ವ್ಯಾಗನ್ನ ರೈಲು ಸೇವೆ ಕಲ್ಪಿಸಿತ್ತು.
ಮುಖ್ಯಮಂತ್ರಿ ಕೆ. ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಸರ್ಕಾರವು ಈ ಹಿಂದೆ 10 ಮಿಲಿಯನ್ ಲೀಟರ್ ನೀರನ್ನು ಜೋಲಾರ್‌ಪೆಟ್‌ನಿಂದ ರೈಲು ಮೂಲಕ ಸಾಗಿಸುವುದಾಗಿ ಘೋಷಿಸಿತ್ತು. ಇದಕ್ಕಾಗಿ ₹ 65 ಕೋಟಿ ಮೀಸಲಿಡಲಾಗಿದೆ ಎಂದಿದ್ದರು.
ಪ್ರಸ್ತುತ, ಚೆನ್ನೈ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿತ್ಯ ಸುಮಾರು 525 ಮಿಲಿಯನ್ ಲೀಟರ್ (ಎಂಎಲ್‌ಡಿ) ಪೂರೈಸುತ್ತಿದೆ. ವಿಶೇಷ ರೈಲು ಮೂಲಕ ಬಂದಿರುವ ನೀರು ಪ್ರಸ್ತುತ ನೀರಿನ ಅಭಾವ ತಗ್ಗಿಸಲಿದೆ. ಆದರೆ, ಜೊಲಾರ್ಪೇಟೆ ಚೆನ್ನೈನಿಂದ 217 ಕಿ.ಮೀ. ದೂರದಲ್ಲಿದ್ದು, ಪ್ರತಿ ಟ್ರಿಪ್‌ಗೆ ಸುಮಾರು ₹ 8.5 ಲಕ್ಷ ವೆಚ್ಚ ತಗುಲಲಿದೆ.