ನವದೆಹಲಿ: ಕೇಂದ್ರದ ಆಡಳಿತದಲ್ಲಿ ಮೇಜರ್ ಸರ್ಜರಿ ನಡೆಸಿದ ಸಿಬ್ಬಂದಿ ಸಚಿವಾಲಯ, ಉನ್ನತ ಮಟ್ಟದ ಅಧಿಕಾರ ಪುನರ್ ರಚನೆಯ ಭಾಗವಾಗಿ ಹಿರಿಯ ಐಎಎಸ್ ಅಧಿಕಾರಿ ದೇಬಶಿಶ್ ಪಾಂಡಾ ಅವರನ್ನು ನೂತನ ಹಣಕಾಸು ಕಾರ್ಯದರ್ಶಿಯಾಗಿ ನೇಮಿಸಿದೆ.
ಉತ್ತರ ಪ್ರದೇಶದ ಕೇಡರ್‌ನ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಪಾಂಡ ಪ್ರಸ್ತುತ, ಹಣಕಾಸು ಸೇವೆಗಳ ವಿಭಾಗದ ವಿಶೇಷ ಕಾರ್ಯದರ್ಶಿಯಾಗಿದ್ದಾರೆ.
ಈ ತಿಂಗಳ ಅಂತ್ಯದಲ್ಲಿ ಅಧಿಕಾರ ವಹಿಸಿಕೊಳ್ಳುವ ರಾಜೀವ್ ಕುಮಾರ್ ಅವರ ಸ್ಥಾನದಲ್ಲಿ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಳ್ಳಲು ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ) ಅನುಮೋದನೆ ನೀಡಿದೆ ಎಂದು ಸಿಬ್ಬಂದಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇವರ ಜೊತೆಗೆ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಅಗರ್ವಾಲ್ ಅವರನ್ನು ಗ್ರಾಹಕ ವ್ಯವಹಾರಗಳ ವಿಭಾಗದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಅಸ್ಸಾಂ-ಮೇಘಾಲಯ ಕೇಡರ್‌ನ 1985ರ ಬ್ಯಾಚ್‌ನ ಐಎಎಸ್ ಅಧಿಕಾರಿ ಸರಸ್ವತಿ ಪ್ರಸಾದ್ ಅವರು ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗದ ಕಾರ್ಯದರ್ಶಿ ಆಗಲಿದ್ದಾರೆ. ಪ್ರಸ್ತುತ ಉಕ್ಕು ಸಚಿವಾಲಯದ ವಿಶೇಷ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರರಾಗಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಹಾನಿರ್ದೇಶಕ ಉಷಾ ಶರ್ಮಾ ಅವರನ್ನು ಯುವ ವ್ಯವಹಾರಗಳ ವಿಭಾಗದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಹಿರಿಯ ನಾಗರಿಕ ಸೇವಕ ರಾಜ್ ಕುಮಾರ್ ಅವರು ರಕ್ಷಣಾ ಉತ್ಪಾದನಾ ವಿಭಾಗದ ಕಾರ್ಯದರ್ಶಿ ಆಗಲಿದ್ದಾರೆ. ಗುಜರಾತ್ ಕೇಡರ್‌ನ 1987ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದ ಕುಮಾರ್, ಪ್ರಸ್ತುತ ನೌಕರರ ರಾಜ್ಯ ವಿಮಾ ನಿಗಮದ ಮಹಾನಿರ್ದೇಶಕರಾಗಿದ್ದಾರೆ.
ರಾಜೀವ್ ರಂಜನ್ ಅವರನ್ನು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ರಂಜನ್ ಅವರು, ಪ್ರಸ್ತುತ ಜಿಎಸ್ಟಿ ಕೌನ್ಸಿಲ್ ಕಾರ್ಯದರ್ಶಿಯ ವಿಶೇಷ ಕಾರ್ಯದರ್ಶಿಯಾಗಿದ್ದಾರೆ. ಫೆಬ್ರವರಿ 29ರಂದು ನಿವೃತ್ತಿ ಆಗಲಿರುವ ರಜನಿ ಸೇಖ್ರಿ ಸಿಬಲ್ ಅವರ ಸ್ಥಾನಕ್ಕೆ ಮೀನುಗಾರಿಕೆ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಅವರ ಅಧಿಕಾರಾವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ. 2020ರ ಏಪ್ರಿಲ್ 30ಕ್ಕೆ ಮೀರಿ ಇನ್ನೂ ಒಂದು ವರ್ಷದ ಅವಧಿಗೆ ಎಸಿಸಿ ಅನುಮೋದನೆ ನೀಡಿದೆ. ಅಯ್ಯರ್ ಅವರ ಅಧಿಕಾರಾವಧಿ 2021ರ ಏಪ್ರಿಲ್ 30ರವರೆಗೆ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.