ಮುಂಬೈ: ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಿರುವುದಾಗಿ ರಾಷ್ಟ್ರದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ಹೇಳಿದೆ.
ಕಡಿಮೆ ಅವಧಿಯ ಸಾಲಗಳಿಗೆ ಇದು ಅನ್ವಯವಾಗಲಿದ್ದು, ಜುಲೈ 10ರಿಂದ ಐದರಿಂದ 10 ಬೇಸಿಸ್ ಪಾಯಿಂಟ್ಗಳಷ್ಟು ಬಡ್ಡಿ ದರ ಕಡಿಮೆಯಾಗಲಿದೆ ಎಂದು ಎಸ್ಬಿಐ ಸ್ಪಷ್ಟನೆ ನೀಡಿದೆ.
ಸಾಲ ಪಡೆಯುವ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಎಸ್ನಿಐ ಈ ನಿರ್ಧಾರಕ್ಕೆ ಬಂದಿದೆ. ಇದರಿಂದಾಗಿ ಬೇಡಿಕೆಯನ್ನು ಹೆಚ್ಚಿಸುವ ಗುರಿಯನ್ನು ಕೂಡಾ ಎಸ್ಬಿಐ ಹೊಂದಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಎಸ್ಬಿಐನ ಪರಿಷ್ಕೃತ ನಿರ್ಧಾರದಿಂದಾಗಿ ಕಡಿಮೆ ಅವಧಿಯ ಸಾಲಗಳ ಮೇಲೆ ಸಾಲದ ಮೇಲಿನ ಬಡ್ಡಿ ದರ ವರ್ಷಕ್ಕೆ 6.65ಕ್ಕೆ ಇಳಿಯಲಿದೆ. ಇದರಿಂದ ಸಾಲ ಪಡೆಯುವವರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.
ಎಸ್ಬಿಐ ಸತತ 14ನೇ ಬಾರಿಗೆ ಸಾಲದ ಮೇಲಿನ ಕನಿಷ್ಠ ಬಡ್ಡಿದರವನ್ನು ಕಡಿಮೆ ಮಾಡುತ್ತಿದ್ದು, ಬೇರೆ ಬ್ಯಾಂಕ್ಗಳಿಗೆ ಹೋಲಿಸಿದರೆ ಭಾರೀ ಕುಸಿತ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ.