ನವದೆಹಲಿ: ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಕಂಪನಿ ಮೊದಲ ಸ್ಥಾನಕ್ಕೆ ಏರಿದೆ ಎಂದು ಕೌಂಟರ್ ಪಾಯಿಂಟ್ ರಿಸರ್ಚ್ ಸಂಸ್ಥೆ ಇತ್ತೀಚಿನ ಅಂಕಿ - ಅಂಶಗಳಲ್ಲಿ ಮಾಹಿತಿ ಬಹಿರಂಗಪಡಿಸಿದೆ.
ಲಾಕ್ಡೌನ್ ಹೊಡೆತದಿಂದ ಸ್ಯಾಮ್ಸಂಗ್ ಚೇತರಿಸಿಕೊಂಡಿದೆ ಎಂದು ಕೌಂಟರ್ ಪಾಯಿಂಟ್ ತನ್ನ 'ಮಂತ್ಲಿ ಮಾರ್ಕೆಟ್ ಪ್ಲಸ್ ರಿಪೋರ್ಟ್'ನಲ್ಲಿ ಉಲ್ಲೇಖಿಸಿರುವುದು ಮಾತ್ರವಲ್ಲದೇ 2018ರಿಂದ ಭಾರತದಲ್ಲಿ ಅತ್ಯಂತ ಹೆಚ್ಚು ಮಾರುಕಟ್ಟೆ ಪಾಲನ್ನು ಸ್ಯಾಮ್ಸಂಗ್ ಹೊಂದಿದ್ದು, ದೇಶದಲ್ಲಿ ಚೀನಾ ವಿರೋಧಿ ನೀತಿಯನ್ನು ತನ್ನಡೆಗೆ ತಿರುಗಿಸಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಭೌಗೋಳಿಕ ನೀತಿಗಳು ಮತ್ತು ರಾಜಕೀಯ ಸಂಬಂಧಗಳೂ ಮಾರುಕಟ್ಟೆಯ ಮೇಲೆ ಹಲವು ಆಯಾಮಗಳಲ್ಲಿ ಅತಿ ಹೆಚ್ಚು ಪರಿಣಾಮಗಳನ್ನು ಬೀರುತ್ತಿವೆ. ಇದು ಮಾರುಕಟ್ಟೆಯ ಕ್ರಿಯೆಗಳನ್ನು ಕೂಡಾ ಹೆಚ್ಚಿಸಿದೆ ಎಂದು ಸಂಶೋಧನೆಯ ವಿಶ್ಲೇಷಕ ಮಿನ್ಸೋ ಕಾಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಇದರ ಜೊತೆಗೆ ಸ್ಮಾರ್ಟ್ ಫೋನ್ ಮಾರುಕಟ್ಟೆ ಇತ್ತೀಚೆಗೆ ಪ್ರಬಲವಾಗುತ್ತಿದ್ದು, ಸ್ಯಾಮ್ಸಂಗ್, ಆಪಲ್, ಶಿಯೋಮಿ, ಹಾಗೂ ಒಪ್ಪೋ ಸ್ಮಾರ್ಟ್ಫೋನ್ಗಳು ಅತಿ ಹೆಚ್ಚು ಪ್ರಮಾಣದಲ್ಲಿ ವ್ಯಾಪಿಸಿಕೊಂಡಿವೆ.
ಭಾರತದಲ್ಲಿ ಸ್ಯಾಮ್ಸಂಗ್ ಚೇತರಿಕೆ ಕಂಡು, ಅಗ್ರಸ್ಥಾನಕ್ಕೆ ಏರಿದ್ದರೂ, ಚೀನಿ ಮೊಬೈಲ್ ಕಂಪನಿ ಶಿಯೋಮಿ ಜಗತ್ತಿನಲ್ಲಿ ತುಂಬಾ ವರ್ಷದಿಂದ ತನ್ನ ಪ್ರಭಾವವನ್ನು ಇನ್ನೂ ಉಳಿಸಿಕೊಂಡಿದೆ. ಕೇಂದ್ರ ಪೂರ್ವ ಯೂರೋಪ್ನಂತಹ ಹುವಾವೆ ಪ್ರಾಬಲ್ಯ ಬೀರಿದ್ದ ಜಾಗಗಳಲ್ಲಿ ಶಿಯೋಮಿ ಅತಿ ಹೆಚ್ಚಾಗಿ ಮಾರುಕಟ್ಟೆಯನ್ನು ಹೊಂದಿದೆ.
ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಈಗ ಸ್ಯಾಮ್ಸಂಗ್ ಶೇಕಡಾ 22ರಷ್ಟು ಪಾಲನ್ನು ಹೊಂದಿದ್ದು, ಏಪ್ರಿಲ್ ತಿಂಗಳಲ್ಲಿ ಸ್ವಲ್ಪ ಮಟ್ಟಿಗಿನ ಆರ್ಥಿಕ ಕುಸಿತದ ಕಾರಣದಿಂದ ಹುವಾವೆ ಮೊದಲ ಸ್ಥಾನಕ್ಕೆ ಏರಿತ್ತು.
ಅಮೆರಿಕ ಆಂತರಿಕ ಭದ್ರತೆ ಹಾಗೂ ಖಾಸಗಿತನ ವಿಚಾರಕ್ಕೆ ಸಂಬಂಧಿಸಿದಂತೆ ಹುವಾವೆ ಉತ್ಪನ್ನಗಳಿಗೆ ನಿಷೇಧ ಹೇರಿದ ನಂತರ ಸ್ಯಾಮ್ಸಂಗ್ ಉದ್ಯಮಕ್ಕೆ ಹುವಾವೆಯ ಜಾಗಗಳನ್ನು ಆಕ್ರಮಿಸಿಕೊಂಡು ವ್ಯಾಪಾರ ವಿಸ್ತರಣೆಗೆ ತೊಡಗಿಸಿಕೊಂಡಿತ್ತು.
ಆಪಲ್ ಐಫೋನ್ ಕೂಡಾ ತನ್ನ ವ್ಯಾಪಾರದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇದೇ ಅಕ್ಟೋಬರ್ 13ರಂದು ಐಫೋನ್ 12 ಅನ್ನು ಬಿಡುಗಡೆ ಮಾಡಿದ್ದು, ಈ ವರ್ಷದ ಅಂತ್ಯಕ್ಕೆ ಅಥವಾ ನವೆಂಬರ್ನಲ್ಲಿ ಗ್ರಾಹಕರ ಕೈಗೆ ಸಿಗಲಿದೆ.