ನವದೆಹಲಿ : ಸ್ವಿಸ್ ಬ್ಯಾಂಕ್ಗಳಲ್ಲಿನ ಭಾರತೀಯ ಗ್ರಾಹಕರ ಠೇವಣಿ 2019ರಿಂದ ಕುಸಿದಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ಪ್ರತಿಪಾದಿಸಿದೆ. ಆದರೆ, ನಿಧಿಯಲ್ಲಿನ ಬದಲಾವಣೆಗಳಿಗೆ ಸಂಭವನೀಯ ಕಾರಣಗಳ ಬಗ್ಗೆ ಅಭಿಪ್ರಾಯ ಸಂಗ್ರಹದ ಜೊತೆಗೆ ಸಂಬಂಧಿತ ಸ್ವಿಸ್ ಅಧಿಕಾರಿಗಳಿಂದ ವಿವರಗಳನ್ನು ಕೋರಲಾಗುತ್ತದೆ. ಠೇವಣಿಗಳು ಅರ್ಧದಷ್ಟು ಕಡಿಮೆಯಾಗಿದೆ. ಆದರೆ, ಸಂಖ್ಯೆಗಳನ್ನು ನೀಡಿಲ್ಲ ಎಂದು ಸಚಿವಾಲಯ ಹೇಳಿದೆ.
ಭಾರತ ಮೂಲದ ಶಾಖೆಗಳು ಮತ್ತು ಇತರ ಹಣಕಾಸು ಸಂಸ್ಥೆಗಳನ್ನು ಒಳಗೊಂಡಂತೆ ಸ್ವಿಸ್ ಬ್ಯಾಂಕ್ಗಳಲ್ಲಿ ಭಾರತೀಯ ವ್ಯಕ್ತಿಗಳು ಮತ್ತು ಸಂಸ್ಥೆಗಳು ಇರಿಸಿದ ಹಣವು 13 ವರ್ಷಗಳ ಗರಿಷ್ಠ 2.55 ಬಿಲಿಯನ್ ಸ್ವಿಸ್ ಫ್ರಾಂಕ್‌ಗಳಿಗೆ (ಅದಕ್ಕಿಂತ ಹೆಚ್ಚು) ಜಿಗಿದಿದೆ ಎಂದು ಸ್ವಿಟ್ಜರ್ಲೆಂಡ್‌ನ ಕೇಂದ್ರ ಬ್ಯಾಂಕ್‌ನ ಡೇಟಾವನ್ನು ಉಲ್ಲೇಖಿಸಿ ಪಿಟಿಐ ಜೂನ್ 17ರಂದು ವರದಿ ಮಾಡಿತ್ತು.
ಗ್ರಾಹಕರ ಠೇವಣಿ ಕುಸಿದಿದ್ದರೂ, 2020ರಲ್ಲಿ ಬಾಂಡ್, ಸೆಕ್ಯುರಿಟೀಸ್ ಮತ್ತು ಇತರ ಹಣಕಾಸು ಸಾಧನಗಳ ಹಿಡುವಳಿಗಳಲ್ಲಿ 20,700 ಕೋಟಿ ರೂ.ನಷ್ಟು ತೀವ್ರ ಏರಿಕೆಯಾಗಿತ್ತು. ಸಚಿವಾಲಯವು ತನ್ನ ಹೇಳಿಕೆಯಲ್ಲಿ ಈ ಅಂಕಿ-ಅಂಶಗಳು ಸ್ವಿಟ್ಜರ್ಲೆಂಡ್ನಲ್ಲಿ ಭಾರತೀಯರು ಹೊಂದಿರುವ ಹೆಚ್ಚು ಚರ್ಚಿಸಲ್ಪಟ್ಟ ಕಪ್ಪು ಹಣದ ಪ್ರಮಾಣ ಸೂಚಿಸುವುದಿಲ್ಲ. ಇದಲ್ಲದೆ, ಈ ಅಂಕಿ-ಅಂಶಗಳು ಭಾರತೀಯರು, ಎನ್ಆರ್ಐಗಳು ಅಥವಾ ಇತರರು ಸ್ವಿಸ್ ಬ್ಯಾಂಕ್ಗಳಲ್ಲಿ ಹೊಂದಿರಬಹುದಾದ ಹಣವನ್ನು ಒಳಗೊಂಡಿಲ್ಲ. ಆದರೆ, ಗ್ರಾಹಕರ ಠೇವಣಿ 2019ರ ಅಂತ್ಯದಿಂದ ಕುಸಿದಿದೆ ಎಂದು ಸಚಿವಾಲಯ ತಿಳಿಸಿದೆ.