ಮುಂಬೈ: ದಿವಾಳಿ ಹಾದಿ ಹಿಡಿದು ಬಿಕ್ಕಟ್ಟಿಗೆ ಸಿಲುಕಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ (ಪಿಎಂಸಿ) ಅನ್ನು ಸ್ವಾಧೀನಪಡಿಸಿಕೊಳ್ಳಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಾತ್ವಿಕ ಅನುಮೋದನೆ ನೀಡಿದೆ. ಈ ಹಿನ್ನೆಲೆ ಈ ಬ್ಯಾಂಕ್ ಸ್ವಾಧೀನಕ್ಕಾಗಿ ಕಾಯುತ್ತಿರುವ ‘ಸೆಂಟ್ರಂ ಫೈನಾನ್ಷಿಯಲ್ ಲಿಮಿಟೆಡ್’ಗೆ ಕಿರು ಹಣಕಾಸು ಬ್ಯಾಂಕ್ ತೆರೆಯಲು ಅನುಮೋದನೆ ಸಿಕ್ಕಿದೆ.
ನವೆಂಬರ್ 3, 2020ರಂದು ಪಿಎಂಸಿ ಬ್ಯಾಂಕ್ ಲಿಮಿಟೆಡ್ ಪ್ರಕಟಿಸಿದ್ದ ಅಧಿಸೂಚನೆ ಪ್ರತಿಕ್ರಿಯೆಯಾಗಿ, ಫೆಬ್ರವರಿ 1,2021ರಂದು ಸೆಂಟ್ರಂ ಫೈನಾನ್ಷಿಯಲ್ ಲಿಮಿಟೆಡ್ ಸಲ್ಲಿಸಿರುವ ಬ್ಯಾಂಕ್ ಆರಂಭ ಸಂಬಂಧಿತ ಮನವಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮೊದಲು ಪಿಎಂಸಿ ಬ್ಯಾಂಕ್‌ನಲ್ಲಿ ಹಣ ಹೂಡಿಕೆ ಮಾಡಲು ನಾಲ್ಕು ಪ್ರಸ್ತಾವಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಮುಖ್ಯವಾಗಿ ಸೆಂಟ್ರಂ ಫೈನಾನ್ಶಿಯಲ್ ಸರ್ವಿಸಸ್ ಕೂಡ ಒಂದಾಗಿದೆ.
ಖಾಸಗಿ ವಲಯದಲ್ಲಿ ಸಣ್ಣ ಹಣಕಾಸು ಬ್ಯಾಂಕ್ಗಳಿಗೆ ಪರವಾನಗಿ ನೀಡುವ ಪರವಾನಗಿ ಅಡಿ ಸಣ್ಣ ಹಣಕಾಸು ಬ್ಯಾಂಕ್ ಸ್ಥಾಪಿಸಲು ಸೆಂಟ್ರಂ ಫೈನಾನ್ಷಿಯಲ್ ಸರ್ವೀಸಸ್‌ಗೆ 'ಇನ್-ಪ್ರಿನ್ಸಿಪಲ್' ಅನುಮೋದನೆ ನೀಡಿದೆ ಎಂದು ಆರ್‌ಬಿಐ ಹೇಳಿದೆ. ಪಿಎಂಸಿ ಬ್ಯಾಂಕ್ ತನ್ನ ಪುನರ್ ನಿರ್ಮಾಣಕ್ಕಾಗಿ ಹೂಡಿಕೆ ಅಥವಾ ಷೇರುಗಳ ಭಾಗವಹಿಸುವಿಕೆಗಾಗಿ ಅರ್ಹ ಹೂಡಿಕೆದಾರರಿಂದ ಅರ್ಜಿಯನ್ನ ಆಹ್ವಾನಿಸಿತ್ತು.
ರಿಯಲ್ ಎಸ್ಟೇಟ್ ಸಂಸ್ಥೆ ಹೆಚ್ಡಿಐಎಲ್ಗೆ ನೀಡಲಾಗಿದ್ದ 8,880 ಕೋಟಿ ಸಾಲದ ಪ್ರಮಾಣ ಮರೆಮಾಚಿದ್ದಲ್ಲದೇ, ತಪ್ಪು ಲೆಕ್ಕ ನೀಡಿ, ಬ್ಯಾಂಕ್ ದಿವಾಳಿ ಹಂತ ತಲುಪಿತ್ತು. ಹೀಗಾಗಿ ಸೆಪ್ಟೆಂಬರ್ 2019ರಲ್ಲಿ ಆರ್‌ಬಿಐ ಪಿಎಂಸಿ ಮಂಡಳಿಯನ್ನು ವಜಾಗೊಳಿಸಿತ್ತು ಮತ್ತು ಗ್ರಾಹಕರ ಸೇವೆಯ ಮೇಲೆ ಕೆಲವು ನಿರ್ಬಂಧ ವಿಧಿಸಿತ್ತು. ಅಲ್ಲದೇ ಗ್ರಾಹಕರ ಖಾತೆಯಿಂದ ಹಣ ಹಿಂಪಡೆಯಲು ಮಿತಿ ನಿಗದಿಗೊಳಿಸಿತ್ತು.
ಇದನ್ನೂ ಓದಿ: ಏಷ್ಯಾದ 2ನೇ ಶ್ರೀಮಂತ ವ್ಯಕ್ತಿ ಸ್ಥಾನ ಕಳೆದುಕೊಂಡ ಗೌತಮ್ ಅದಾನಿ