ನವದೆಹಲಿ: ಕೋವಿಡ್ ಲಾಕ್ಡೌನ್ ವೇಳೆಯಲ್ಲಿ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಲು ಭಾರತೀಯ ರೈಲ್ವೆ ಇಲಾಖೆಯು ಶ್ರಮಿಕ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿತ್ತು. ಇದಕ್ಕಾಗಿ ಬರೋಬ್ಬರಿ 2,142 ಕೋಟಿ ರೂ. ವೆಚ್ಚ ಮಾಡಿತ್ತು. ಇದಕ್ಕೆ ಪ್ರತಿಯಾಗಿ ರೈಲ್ವೆ ಇಲಾಖೆ ಗಳಿಸಿದ್ದು 429 ಕೋಟಿ ರೂ. ಆದಾಯ ಮಾತ್ರ.
ಗುಜರಾತ್ ಹಾಗೂ ಮಹಾರಾಷ್ಟ್ರದಿಂದಲೇ ಹೆಚ್ಚು ಮಂದಿ ವಲಸಿಗರು ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ. ಗುಜರಾತ್ನಿಂದಲೇ 15 ಲಕ್ಷ ಕಾರ್ಮಿಕರನ್ನು ಕರೆದೊಯ್ಯಲು 1,027 ರೈಲುಗಳು ಓಡಾಟ ನಡೆಸಿದ್ದು, 102 ಕೋಟಿ ಶುಲ್ಕವನ್ನು ರಾಜ್ಯ ರೈಲ್ವೆ ಪಾವತಿಸಿದೆ. 12 ಲಕ್ಷ ವಲಸಿಗರಿಗಾಗಿ ಮಹಾರಾಷ್ಟ್ರವು 844 ರೈಲುಗಳಿಂದ 85 ಕೋಟಿ ರೂ., 4 ಲಕ್ಷ ವಲಸಿಗರಿಗಾಗಿ ತಮಿಳುನಾಡು 271 ರೈಲುಗಳಿಂದ 34 ಕೋಟಿ ರೂ. ಪಾವತಿಸಿದೆ. ಉಳಿದಂತೆ ಉತ್ತರ ಪ್ರದೇಶ 21 ಕೋಟಿ, ಬಿಹಾರ 8 ಕೋಟಿ ಹಾಗೂ ಪಶ್ಚಿಮ ಬಂಗಾಳ 64 ಲಕ್ಷ ರೂ. ಪಾವತಿಸಿದೆ.
ಲಾಕ್ಡೌನ್ ಸಮಯದಿಂದ ಜುಲೈ 9ರವರೆಗೆ ಒಟ್ಟು 4,615 ರೈಲುಗಳಲ್ಲಿ 63 ಲಕ್ಷ ವಲಸಿಗರನ್ನು ತಮ್ಮ ತಮ್ಮ ರಾಜ್ಯಗಳಿಗೆ ಕರೆದೊಯ್ಯಲಾಗಿದೆ. 2,142 ಕೋಟಿ ರೂಪಾಯಿ ವೆಚ್ಚಕ್ಕೆ ಬದಲಾಗಿ ಇಲಾಖೆಗೆ ಸಿಕ್ಕಿದ್ದು 429 ಕೋಟಿ ರೂ. ಮಾತ್ರ. ಇದು ಒಟ್ಟು ವೆಚ್ಚದ ಮೊತ್ತದ ಶೇ. 15ರಷ್ಟು ಆಗಿದೆ ಎಂದು ರೈಲ್ವೆ ವಕ್ತಾರ ಡಿ.ಜೆ.ನರೈನ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ರೋಗದ ಕರಿಛಾಯೆ ಆವರಿಸಿದೆ, ಜನರು ತೊಂದರೆಯಲ್ಲಿದ್ದಾರೆ, ಆದರೆ ಸರ್ಕಾರ ವಿಪತ್ತನ್ನು ಲಾಭವನ್ನಾಗಿ ಪರಿವರ್ತಿಸುವ ಮೂಲಕ ಬಡವರ ವಿರೋಧಿಯಾಗಿದೆ" ಎಂದು ಆರೋಪಿಸಿದ್ದಾರೆ.