ನವದೆಹಲಿ: ರಫೇಲ್ ಡೀಲ್...! ಮೋದಿ ಸರ್ಕಾರವನ್ನು ಚುನಾವಣೆಯಲ್ಲಿ ವಿಪಕ್ಷಗಳು ಜಗ್ಗಾಡಿದ್ದ ಹಾಗೂ ರಾಜಕೀಯ ಸ್ವರೂಪದಿಂದಲೇ ಬಹಳ ಚರ್ಚಿತವಾದ ಈ ಒಪ್ಪಂದ ಸದ್ಯ ಮಹತ್ವದ ಘಟ್ಟ ತಲುಪಿದೆ.
ಅಕ್ಟೋಬರ್ 8ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಅಧಿಕೃತವಾಗಿ ಫ್ರಾನ್ಸ್ ಸರ್ಕಾರ ರಫೇಲ್ ಜೆಟ್ ಹಸ್ತಾಂತರ ಮಾಡಲಿದೆ. ಈ ಮೂಲಕ ಭಾರತೀಯ ವಾಯುಸೇನೆಗೆ ರಫೇಲ್ ಬಹುದೊಡ್ಡ ಬಲ ತುಂಬಲಿದೆ.
ಏನಿದು ರಫೇಲ್ ಡೀಲ್..?
ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಹಣಿಯಲು ರಫೇಲ್ ಒಪ್ಪಂದ ಮತ್ತು ಅದರಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರವನ್ನು ಕಾಂಗ್ರೆಸ್ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡಿತ್ತಾದರೂ ಸಫಲವಾಗಿರಲಿಲ್ಲ. ಹಾಗಿದ್ದರೆ ಚುನಾವಣೆ ವೇಳೆ ರಾಜಕೀಯ ಕೆಸರೆಚಾಟಕ್ಕೆ ಕಾರಣವಾಗಿದ್ದ ಈ ಮಹತ್ವದ ಒಪ್ಪಂದ ಏನು ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. 2015ರಲ್ಲಿ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಫ್ರಾನ್ಸ್ ಸರ್ಕಾರದಿಂದ 36 ರಫೇಲ್ ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆಗೆ ಆಮದು ಮಾಡಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ರಫೇಲ್ ಒಪ್ಪಂದದ ಅಡಿಯಲ್ಲಿ ಬಿಜೆಪಿ ಸರ್ಕಾರ ಹೆಚ್ಚಿನ ಮೊತ್ತ ನೀಡಿದೆ ಎಂದು ಕಾಂಗ್ರೆಸ್ ದೂರಿದೆ.
ಏನು ಕಾಂಗ್ರೆಸ್ ದೂರು..?
ಯುಪಿಎ ಸರ್ಕಾರದಲ್ಲೇ ರಫೇಲ್ ಜೆಟ್ ಖರೀದಿಗೆ ಮಾತುಕತೆ ನಡೆಸಲಾಗಿತ್ತು ಮತ್ತು 126 ಯುದ್ಧ ವಿಮಾನ ಖರೀದಿಗೆ ಯೋಜನೆ ರೂಪಿಸಲಾಗಿತ್ತು. 126 ರಫೇಲ್ ಫೈಟರ್ ಜೆಟ್ಗಳ ಪೈಕಿ 108 ವಿಮಾನವನ್ನು ಹೆಚ್ಎಎಲ್ ನಿರ್ಮಿಸಲಿತ್ತು ಎನ್ನುವುದು ಕಾಂಗ್ರೆಸ್ ನಾಯಕರ ವಾದ.
₹570 ಕೋಟಿಗೆ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಕಾಂಗ್ರೆಸ್ ಅಂತಿಮಗೊಳಿಸಿತ್ತು. ಆದರೆ, ಬಿಜೆಪಿ ಸರ್ಕಾರ ಅದೇ ಒಪ್ಪಂದಕ್ಕೆ ₹1670 ಕೋಟಿ ನೀಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
ಗೇಮ್ ಚೇಂಜರ್ ರಫೇಲ್..!
ರಫೇಲ್ ಯುದ್ಧ ವಿಮಾನವನ್ನು ಗೇಮ್ ಚೇಂಜರ್ ಎಂದೇ ಬಣ್ಣನೆ ಮಾಡಲಾಗಿದೆ. ಪ್ರಸ್ತುತ ಭಾರತೀಯ ವಾಯುಸೇನೆಯಲ್ಲಿ ಯುದ್ಧ ವಿಮಾನಗಳ ಸಂಖ್ಯೆ ಕಡಿಮೆ ಇದ್ದು ಈ ಹಿನ್ನೆಲೆಯಲ್ಲಿ ರಫೇಲ್ ಆಗಮನ ದೊಡ್ಡ ಶಕ್ತಿ ನೀಡಲಿದೆ. ನಿರ್ದಿಷ್ಟ ಗುರಿ ಕರಾರುವಕ್ಕಾಗಿ ತಲುಪುವ ಸಾಮರ್ಥ್ಯ ಹೊಂದಿರುವ ರಫೇಲ್ ಶತ್ರುಗಳ ನೆಲೆಯಲ್ಲಿ ಧ್ವಂಸ ಮಾಡುವುದರಲ್ಲಿ ನಿಸ್ಸೀಮ ಎಂದೇ ಹೇಳಲಾಗುತ್ತಿದೆ. ರಫೇಲ್ ಎರಡು ಮಿಸೈಲ್ಗಳನ್ನು ಏಕಕಾಲಕ್ಕೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಪಾಕಿಸ್ತಾನದ ಎರಡು ವಿಭಿನ್ನ ಸ್ಥಳಗಳಿಗೆ ಗುರಿಯಿಟ್ಟು ಹೊಡೆಯಬಹುದಾಗಿದೆ.