ನವದೆಹಲಿ: ಕಾಂಗ್ರೆಸ್ ಆಡಳಿತದ ಪಂಜಾಬ್ ರಾಜ್ಯ ಸರ್ಕಾರವು ಕೇಂದ್ರ ನೀಡಿದ ಸಾಲ ಪ್ರಸ್ತಾಪವನ್ನು ಅಂಗೀಕರಿಸಿದ್ದು, ಜಿಎಸ್ಟಿ ಆದಾಯದ ಕೊರತೆ ಪೂರೈಕೆಗೆ ವಿಶೇಷ ವಿಂಡೋ ಮೂಲಕ 8,359 ಕೋಟಿ ರೂ. ಪಡೆಯಲಿದೆ.
ಜಿಎಸ್ಟಿ ಅನುಷ್ಠಾನದಿಂದ ಉಂಟಾಗುವ ಆದಾಯದ ಕೊರತೆಯನ್ನು ಪೂರೈಸಲು ಕೇಂದ್ರ ಸರ್ಕಾರದ ಆಯ್ಕೆ 1ರ ಅನ್ವಯ ರಾಜ್ಯಗಳಿಗೆ ವಿಶೇಷ ಗವಾಕ್ಷಿ ಒದಗಿಸಲು ಆರ್‌ಬಿಐಯೊಂದಿಗೆ ಸಮಾಲೋಚಿಸಿ 97,000 ಕೋಟಿ ರೂ.ಗಳನ್ನು ಸಮಂಜಸ ಬಡ್ಡಿ ದರದಲ್ಲಿ ಸಾಲವಾಗಿ ಒದಗಿಸುತ್ತದೆ. ಈ ಹಣವನ್ನು ಸೆಸ್ ಸಂಗ್ರಹದಿಂದ 5 ವರ್ಷಗಳ ನಂತರ ಮರು ಪಾವತಿಸಬಹುದು.
ಆಯ್ಕೆ-2ರ ಅನ್ವಯ ರಾಜ್ಯಗಳಿಗೆ ಈ ವರ್ಷದ 2,35,000 ಕೋಟಿ ರೂ. ಸಂಪೂರ್ಣ ಜಿಎಸ್ಟಿ ಪರಿಹಾರದ ಅಂತರವನ್ನು ರಾಜ್ಯಗಳು ಆರ್‌ಬಿಐನೊಂದಿಗೆ ಸಮಾಲೋಚಿಸಿ ಪೂರೈಸಬಹುದು.
ಜಿಎಸ್ಟಿ ಜಾರಿಯಿಂದ ಉಂಟಾದ ಆದಾಯದ ಕೊರತೆ ನೀಗಿಸಲು ಪಂಜಾಬ್ ಸರ್ಕಾರ ಆಯ್ಕೆ 1 ಸ್ವೀಕಾರ ಮಾಡುವುದಾಗಿ ತಿಳಿಸಿದೆ. ಈ ಆಯ್ಕೆ ಆರಿಸಿದ ರಾಜ್ಯಗಳ ಸಂಖ್ಯೆ 26ಕ್ಕೆ ಏರಿದೆ. ಇದರ ಜೊತೆಗೆ ಎಲ್ಲಾ 3 ಕೇಂದ್ರಾಡಳಿತ ಪ್ರದೇಶಗಳು (ದೆಹಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೇರಿ) ಸಹ ಆಯ್ಕೆ 1ರ ಪರವಾಗಿ ನಿರ್ಧರಿಸಿವೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇಂದ್ರವು ಈಗಾಗಲೇ ನಾಲ್ಕು ಕಂತುಗಳಲ್ಲಿ ರಾಜ್ಯಗಳ ಪರವಾಗಿ 24,000 ಕೋಟಿ ರೂ. ಎರವಲು ಪಡೆದಿದೆ. ಅದನ್ನು 23 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಅಕ್ಟೋಬರ್ 23, ನವೆಂಬರ್ 2, ನವೆಂಬರ್ 9 ಮತ್ತು ನವೆಂಬರ್ 23ರಂದು ರವಾನಿಸಿದೆ.
ಮುಂದಿನ ಸುತ್ತಿನ ಸಾಲದಿಂದ ಪಂಜಾಬ್, ಕೇರಳ ಮತ್ತು ಪಶ್ಚಿಮ ಬಂಗಾಳವೂ ಈ ವಿಂಡೋ ಮೂಲಕ ಸಂಗ್ರಹಿಸಿದ ಹಣ ಪಡೆಯುತ್ತವೆ. ಈ ವಾರದ ಆರಂಭದಲ್ಲಿ ಕೇರಳ ಮತ್ತು ಪಶ್ಚಿಮ ಬಂಗಾಳವೂ ಜಿಎಸ್ಟಿ ಆದಾಯದ ಕೊರತೆ ಪೂರೈಸಲು ಸಾಲ ಪಡೆಯುವ ಆಯ್ಕೆಯನ್ನು ಸ್ವೀಕರಿಸುವ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಿದ್ದವು.