ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ) ಹಗರಣ ಆರೋಪದಲ್ಲಿ 2019ರ ಡಿಸೆಂಬರ್ನಲ್ಲಿ ಬಂಧಿತರಾಗಿದ್ದ ಬ್ಯಾಂಕ್ನ ಮೂವರು ಮಾಜಿ ನಿರ್ದೇಶಕರಿಗೆ ಬಾಂಬೆ ಹೈಕೋರ್ಟ್ ಜಾಮೀನು ಕರುಣಿಸಿದೆ.
ನಿರ್ದೇಶಕರಾಗಿದ್ದ ಮುಕ್ತಿ ಬವಿಸಿ, ತೃಪ್ತಿ ಸುಹಾಸ್ ಬೇನ್ ಮತ್ತು ರಂಜೀತ್ ತಾರಾ ಸಿಂಗ್ ನಂದ್ರಾಜೋಗ್ ಅವರಿಗೆ ಜಾಮೀನು ನೀಡಿದೆ. ನ್ಯಾಯಾಲಯವು ಅವರ ಪಾಸ್ಪೋರ್ಟ್ಗಳನ್ನು ಸಲ್ಲಿಸುವಂತೆ ಹೇಳಿದೆ.
2020ರ ಮೇ ತಿಂಗಳಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ ನಂತರ ಈ ಮೂವರು ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
ಹಗರಣದ ಪ್ರಮುಖ ಆರೋಪಿಗಳಲ್ಲಿ ಈ ಮೂವರು ಸೇರಿದ್ದಾರೆ. ಬವಿಸಿ 2011ರಿಂದ ಪಿಎಂಸಿ ಬ್ಯಾಂಕಿನ ಸಾಲ ಮತ್ತು ಮುಂಗಡ ಸಮಿತಿಯ ನಿರ್ದೇಶಕ ಮತ್ತು ಸದಸ್ಯರಾಗಿದ್ದರು. ಬೇನ್ 2010ರಿಂದ 2015ರ ನಡುವೆ ಸಾಲ ಮರುಪಡೆಯುವಿಕೆ ಸಮಿತಿಯ ಸದಸ್ಯರಾಗಿದ್ದರು. 2015 ರಿಂದ ಸಾಲ ಮತ್ತು ಮುಂಗಡ ಉಸ್ತುವಾರಿ ವಹಿಸಿಕೊಂಡಿದ್ದರು. ನಿರ್ದೇಶಕರಲ್ಲದೇ, ನಂದ್ರಾಜಾಗ್ ಬ್ಯಾಂಕಿನ ಚೇತರಿಕೆ ಸಮಿತಿಯ ಸದಸ್ಯರಾಗಿದ್ದರು. ಸುಮಾರು 13 ವರ್ಷಗಳ ಕಾಲ ಇದ್ದರು.
ಹಗರಣದ ನಂತರ ಗ್ರಾಹಕರು ವಾಪಸಾತಿ ಸೇರಿದಂತೆ ವಂಚನೆ ಪೀಡಿತ ಬಹು - ರಾಜ್ಯ ನಗರ ಸಹಕಾರಿ ಬ್ಯಾಂಕ್‌ಗೆ ಆರ್‌ಬಿಐ 2019ರ ಸೆಪ್ಟಂಬರ್‌ನಲ್ಲಿ ನಿರ್ಬಂಧ ಹೇರಿತ್ತು. ಪಿಎಂಸಿ ಬ್ಯಾಂಕ್ ಹೌಸಿಂಗ್ ಡೆವಲಪ್‌ಮೆಂಟ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ಗೆ (ಎಚ್‌ಡಿಐಎಲ್) ನೀಡಿದ ಸಾಲಗಳಲ್ಲಿ ಅಕ್ರಮಗಳನ್ನು ಕೇಂದ್ರ ಬ್ಯಾಂಕ್ ಪತ್ತೆ ಹಚ್ಚಿತ್ತು.