ಬೆಂಗಳೂರು: ಹೈದರಾಬಾದ್ ಮೂಲದ ಬಾಹ್ಯಾಕಾಶ ಸಂಶೋಧನಾ ಕಂಪನಿಯಾದ ಸ್ಕೈರೂಟ್ ಏರೋಸ್ಪೇಸ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜತೆಗೆ ಒಪ್ಪಂದ ಮಾಡಿಕೊಂಡಿದೆ.
ಸ್ಕೈರೂಟ್‌ಗೆ ಇಸ್ರೋ ತಾಂತ್ರಿಕ ಪರಿಣತಿ, ಅನುಭವ ಮತ್ತು ಬಾಹ್ಯಾಕಾಶ ವಾಹಕ ಅಭಿವೃದ್ಧಿ ಯೋಜನೆಗಳಿಗೆ ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ‘ನಮ್ಮಲ್ಲಿ ಇಸ್ರೋ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಾವು ತಯಾರಿಸುವ ಸಾಧನಗಳನ್ನು ಶೀಘ್ರದಲ್ಲೇ ಇಸ್ರೋ ಕೇಂದ್ರಗಳಲ್ಲಿ ಪರೀಕ್ಷಿಸಲಾಗುವುದು ಎಂದು ಸ್ಕೈರೂಟ್ ಟ್ವೀಟ್ ಮಾಡಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವೈಜ್ಞಾನಿಕ ಕಾರ್ಯದರ್ಶಿ ಆರ್.ಉಮಾಮಹೇಶ್ವರನ್ ಅವರು ಬಾಹ್ಯಾಕಾಶ ಇಲಾಖೆಯ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದರು. ಸ್ಕೈರೂಟ್ ಏರೋಸ್ಪೇಸ್ ಸಿಇಒ ಪವನ್ ಕುಮಾರ್ ಚಂದನಾ ಅವರು ಕಂಪನಿಯ ಕಡೆಯಿಂದ ಸಹಿ ಹಾಕಿದರು.
ಇದನ್ನೂ ಓದಿ: ಅಮೆರಿಕದ ಶೇಲ್ ಗ್ಯಾಸ್ ಪಾಲು ಮಾರಿದ ರಿಲಯನ್ಸ್: ವಹಿವಾಟಿನ ಮೊತ್ತವೆಷ್ಟು ಗೊತ್ತೇ?
ಸ್ಕೈರೂಟ್ ಪ್ರತಿನಿಧಿಗಳು ಇಸ್ರೋ ಮುಖ್ಯಸ್ಥ ಡಾ.ಕೆ.ಶಿವನ್ ಅವರನ್ನು ಭೇಟಿಯಾಗಿ, ತಮ್ಮ ಉಡಾವಣಾ ವಾಹನ ಪರೀಕ್ಷಿಸಲು ಮತ್ತು ಅರ್ಹತೆ ಪಡೆಯಲು ಸ್ಕೈರೂಟ್‌ಗೆ ಎಲ್ಲ ಬೆಂಬಲದ ಭರವಸೆ ನೀಡಿದರು.
ನಾಗ ಭಾರತ್ ಮತ್ತು ಇಸ್ರೋ ಮಾಜಿ ಉದ್ಯೋಗಿಗಳಾದ ಪವನ್ ಕುಮಾರ್ ಚಂದನಾ ಅವರು ಸ್ಕೈರೂಟ್ ಏರೋಸ್ಪೇಸ್ ಕಂಪನಿ ಸ್ಥಾಪಸಿದ್ದಾರೆ. ಕಂಪನಿಯು ಪ್ರಾಥಮಿಕವಾಗಿ ಉಡಾವಣಾ ವಾಹನ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಂಪನಿಯು ಈಗಾಗಲೇ ಮೂರು ರೀತಿಯ ಉಡಾವಣಾ ವಾಹನಗಳನ್ನು ಅನಾವರಣಗೊಳಿಸಿದ್ದು, ಸಣ್ಣ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಇದು ಈಗಾಗಲೇ 4.3 ಮಿಲಿಯನ್ ಬಂಡವಾಳ ನಿಧಿ ಪಡೆದಿದೆ. ಕಂಪನಿಯು ಇನ್ನೂ 15 ಮಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸುವ ಹಾದಿಯಲ್ಲಿದೆ.