ಬೆಂಗಳೂರು: ಬಹುನಿರೀಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಓಲಾ ಸಂಸ್ಥೆ ಬಿಡುಗಡೆ ಮಾಡಿದ್ದು, ಇಂದು ಸಂಜೆಯಿಂದ ಗ್ರಾಹಕರ ಕೈಸೇರಲಿದೆ. ಇದಕ್ಕೂ ಮೊದಲು ಆಗಸ್ಟ್ 15ರಂದು ಬಿಡುಗಡೆ ಮಾಡಲಾಗುವುದು ಎಂದು ಓಲಾ ಸಂಸ್ಥೆ ಘೋಷಿಸಿತ್ತು.
ಟ್ವಿಟರ್ ಮೂಲಕ ಸುದ್ದಿಯನ್ನು ದೃಢೀಕರಿಸಿರುವ ಓಲಾ ಚೇರ್ಮನ್ ಮತ್ತು ಗ್ರೂಪ್‌ನ ಸಿಇಒ ಭವಿಶ್ ಅಗರ್ವಾಲ್, ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಹೇಳಿದ್ದರು. ಆದರೆ ತಡವಾಗಿ ಅಂದರೆ ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.
ನಮ್ಮ ಸ್ಕೂಟರ್ ಅನ್ನು ಕಾಯ್ದಿರಿಸಿದ ಎಲ್ಲರಿಗೂ ಧನ್ಯವಾದಗಳು! ಉತ್ಪನ್ನ ಮತ್ತು ಲಭ್ಯತೆ ದಿನಾಂಕಗಳ ಕುರಿತು ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳುತ್ತದೆ. ಇದನ್ನು ತಾವು ಎದುರು ನೋಡುತ್ತಿರುವುದಾಗಿ ಅಗರ್‌ವಾಲ್ ಟ್ವೀಟ್ ಮಾಡಿದ್ದಾರೆ.
ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಕೇವಲ 499 ರೂಪಾಯಿ ನೀಡಿ ಕಾಯ್ದಿರಿಸಲು ಅವಕಾಶ ನೀಡಲಾಗಿತ್ತು. ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಕ್ಕೆ ಭಾರತದಾದ್ಯಂತ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭೂತಪೂರ್ವ ಬೇಡಿಕೆಯು ಇದ್ದು, ಗ್ರಾಹಕರ ಆದ್ಯತೆಗಳನ್ನು ಎಲೆಕ್ಟ್ರಾನಿಕ್ ವಾಹನಗಳಿಗೆ(EVs) ವರ್ಗಾಯಿಸುವ ಸ್ಪಷ್ಟ ಸೂಚಕವಾಗಿದೆ ಎಂದು ಅಗರ್‌ವಾಲ್ ಜುಲೈ 17ರಂದು ಟ್ವೀಟ್ ಮಾಡಿದ್ದರು.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಯಾವುದೇ 5A ಸಾಕೆಟ್‌ನಲ್ಲಿ ಹೋಮ್ ಚಾರ್ಜರ್ ಬಳಸಿ ಚಾರ್ಜ್ ಮಾಡಬಹುದು. ಇದಲ್ಲದೆ, ಕಂಪನಿಯು ಗ್ರಾಹಕರ ಅನುಕೂಲಕ್ಕಾಗಿ ದೇಶದ 400 ನಗರಗಳಲ್ಲಿ 1 ಲಕ್ಷ ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ನಿರ್ಮಿಸುತ್ತಿದೆ.
ಬೆಂಗಳೂರು ಮೂಲದ ಓಲಾ ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಇಂದು ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಎಸ್-1 ಮತ್ತು ಎಸ್ 1 ಪ್ರೋ ಶ್ರೇಣಿಯ ಸ್ಕೂಟರ್ ಅನ್ನು ಓಲಾ ಮಾರುಕಟ್ಟೆಗೆ ಪರಿಚಯಿಸಿದೆ.
ಶೋ ರೂಂಗಳಲ್ಲಿ ಮಾರಾಟಕ್ಕೆ ಲಭ್ಯವಿಲ್ಲ: ಬುಕ್ಕಿಂಗ್ ಮಾತ್ರ
499 ರು. ಮುಂಗಡ ಹಣ ಪಾವತಿಸಿ ಸ್ಕೂಟರ್ ಅನ್ನು ಬುಕ್ ಮಾಡಬಹುದಾಗಿದ್ದು, ಅಕ್ಟೋಬರ್ ವೇಳೆಗೆ ಸ್ಕೂಟರ್‌ಗಳು ಗ್ರಾಹಕರ ಕೈಸೇರಲಿವೆ. ಇವು ಯಾವುದೇ ಶೋರೂಂಗಳಲ್ಲಿ ಮಾರಾಟಕ್ಕೆ ಲಭ್ಯವಿಲ್ಲ. ಕೇವಲ ಆನ್‌ಲೈನ್ ಮೂಲಕವೇ ಬುಕ್ ಮಾಡಬೇಕು. ಬಳಿಕ ಮನೆಗೆ ಬೈಕ್ ಪೂರೈಸಲಾಗುವುದು. ಕಂಪನಿ ವಾರ್ಷಿಕ 10 ಲಕ್ಷ ಬೈಕ್ ಉತ್ಪಾದಿಸುವ ಗುರಿ ಹಾಕಿಕೊಂಡಿದೆ.
ಬೈಕ್ ರೇಟ್ ಇಂತಿದೆ
Model S-1 ಎಸ್.1ಪ್ರೊ ದರ 99999 ರಿಂದ 1,29,999 ರೂ ನಿಗದಿ ಮಾಡಲಾಗಿದೆ. ಒಮ್ಮೆ ರಿಚಾರ್ಜ್ ಮಾಡಿದರೆ 121 ಕಿ.ಮೀ ರಿಂದ 181 ಕಿ.ಮೀ ದೂರ ಸಾಗಬಹುದಾಗಿದೆ. 90 ರಿಂದ 115 ಕಿ.ಮೀ ವೇಗದಲ್ಲಿ ಈ ಬೈಕ್ನಲ್ಲಿ ಸಾಗಬಹುದು. 2999ರೂ ಹಾಗೂ. 3199 ರೂ. ಇಎಂಐ ಮೂಲಕ ಬೈಕ್ಗಳನ್ನ ಖರೀದಿಸಬಹುದು.
ಎಷ್ಟು ಗಂಟೆಯಲ್ಲಿ ಬ್ಯಾಟರಿ ಚಾರ್ಜ್ ಆಗುತ್ತೆ?
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಚಾರ್ಜಿಂಗ್ ಸ್ಟೇಷನ್‌ನಿಂದ ಚಾರ್ಜ್ ಮಾಡಿದರೆ ಶೂನ್ಯದಿಂದ ಸಂಪೂರ್ಣವಾಗಿ ರಿಚಾರ್ಜ್ ಆಗಲು ಸುಮಾರು ಎರಡೂವರೆ ಗಂಟೆ ಸಮಯ ತೆಗೆದುಕೊಳ್ಳಲಿದೆ. ಹೈಪರ್ ಚಾರ್ಜಿಂಗ್ ಕೇಂದ್ರದಲ್ಲಿ, ಕೇವಲ 18 ನಿಮಿಷಗಳಲ್ಲಿ ಶೇ 50ರಷ್ಟು ಚಾರ್ಜ್ ಮಾಡಬಹುದು. ಇನ್ನು ಮನೆಯಲ್ಲಿಯೇ ಸಂಪೂರ್ಣವಾಗಿ ಚಾರ್ಜ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಲಿದೆಯಂತೆ.
ಮೂರು ಮಾಡೆಲ್ಗಳಲ್ಲಿ ಓಲಾ ಬೈಕ್
ಇಂದು ಮಾರಾಟ ಆರಂಭಿಸಿರುವ ಓಲಾ ಎಲೆಕ್ಟ್ರಿಕಲ್ ಬೈಕ್ ಮೂರು ಮಾಡೆಲ್ಗಳಲ್ಲಿ ಲಭ್ಯ ಇವೆ. ಓಲಾ ಎಸ್, ಎಸ್ 1 ಮತ್ತು ಓಲಾ ಎಸ್ 1 ಪ್ರೊ ಎಂದು ಹೆಸರಿಡಲಾಗಿದೆ. ಇವುಗಳು ಕ್ರಮವಾಗಿ 2kW, 4kW ಮತ್ತು 7kW ಮೋಟರ್‌ಗಳನ್ನು ಹೊಂದಿರಲಿವೆ.
ಒಟ್ಟು 10 ಬಣ್ಣಗಳಲ್ಲಿ ಓಲಾ ಸ್ಕೂಟರ್ ಲಭ್ಯ ಇದ್ದು, ಗ್ರಾಹಕರು ಕೆಂಪು, ಪಿಂಕ್, ಹಳದಿ, ಸ್ವಿಲರ್, ಬಿಳಿ ಹಾಗೂ ನೀಲಿ ಬಣ್ಣಗಳ ಬೈಕ್ಗಳನ್ನು ನೀವು ಬುಕ್ ಮಾಡಬಹುದಾಗಿದೆ. ಹಾಗೆಯೇ ಈ ಸ್ಕೂಟರ್ನ ಮೈಲೇಜ್ ಅದರ ವೇಗಕ್ಕೆ ಅನುಗುಣವಾಗಿರಲಿದೆ. ಅಂದರೆ 20 ಕಿ.ಮೀ ವೇಗದಲ್ಲಿ ಚಲಾಯಿಸಿದರೆ ಬರೋಬ್ಬರಿ 240 ಕಿ.ಮೀ ರೇಂಜ್ (ಮೈಲೇಜ್) ಸಿಗಲಿದೆ ಎಂದು ಕಂಪೆನಿ ತಿಳಿಸಿದೆ.