ನವದೆಹಲಿ : ತೈಲ ಬೆಲೆಯಲ್ಲಿ ನಿರಂತರ ಏರಿಕೆ ಕಾಣುತ್ತಿರುವ ಹಿನ್ನೆಲೆ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಸಭೆಯಲ್ಲಿ ತೈಲ ದರ ಇಳಿಕೆ ಕುರಿತು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಪ್ರಸ್ತುತ ತೈಲ ಬೆಲೆಯು ತುಂಬಾ ಸವಾಲಿನದಾಗಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ ಬೀರದಂತೆ ತೈಲ ದರ ಏರಿಕೆಯನ್ನು ನಿಧಾನವಾಗಿಸಬೇಕು ಎಂದು ಭಾರತ ಒಪೆಕ್ ಮುಂದೆ ಹೇಳಿದೆ.
ಅಲ್ಲದೆ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನ ಕಡಿತಗೊಳಿಸಬಾರದು. ಭಾರತವು ಸೂಕ್ಷ್ಮ ಮತ್ತು ಬೆಲೆ ಆಧಾರಿತ ಮಾರುಕಟ್ಟೆಯಾಗಿದ್ದು, ಸ್ಪರ್ಧಾತ್ಮಕ ದರದಲ್ಲೂ ತೈಲ ಖರೀದಿಸುತ್ತಿದೆ ಎಂದು ಇಂಧನ ಸಚಿವ ಧರ್ಮೆಂದ್ರ ಪ್ರಧಾನ್ ಹೇಳಿದ್ದಾರೆ.
ಇದಲ್ಲದೆ ಮುಂದಿನ ಕೆಲವು ದಿನಗಳಲ್ಲಿ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಹೆಚ್ಚಿಸಲಿವೆ ಈ ಕಾರಣದಿಂದಾಗಿ ತೈಲ ದರದಲ್ಲಿ ತುಸು ಇಳಿಕೆಯಾಗಬಹುದು ಎಂದು ನನಗನ್ನಿಸುತ್ತಿದೆ ಎಂದಿದ್ದಾರೆ. ಬೇಡಿಕೆ ಚೇತರಿಕೆಯ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅಂತಾರಾಷ್ಟ್ರೀಯ ತೈಲ ಬೆಲೆಗಳು ಏರಿಕೆ ಕಂಡಿದ್ದು, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆ ಏರಿಕೆಯಾಗಿದೆ.
ದೇಶಾದ್ಯಂತ ಇಂಧನ ದರ ದಾಖಲೆಯ ಗರಿಷ್ಠ ಮಟ್ಟದಲ್ಲಿವೆ ಮತ್ತು ಬಹುತೇಕ ರಾಜ್ಯಗಳಲ್ಲಿ ಪ್ರತೀ ಲೀಟರ್ ತೈಲ ಬೆಲೆ 100 ರೂಪಾಯಿ ದಾಟಿದೆ. ರಷ್ಯಾ ಮತ್ತು ಇತರೆ ಹಲವಾರು ಮಿತ್ರ ರಾಷ್ಟ್ರಗಳು ಜುಲೈ1 ರಂದು ಸಭೆ ಸೇರಲಿದ್ದು, ಜಾಗತಿಕ ತೈಲ ಬೇಡಿಕೆ ಮತ್ತು ಪೂರೈಕೆಯ ನಡುವಿನ ನಿರೀಕ್ಷಿತ ಕೊರತೆಯಿಂದಾಗಿ ಉತ್ಪಾದನೆಯನ್ನು ದಿನಕ್ಕೆ 500,000ರಿಂದ 700,000 ಬ್ಯಾರೆಲ್‌ಗಳಿಗೆ ಹೆಚ್ಚಿಸಲು ಸಭೆಯಲ್ಲಿ ಒಪ್ಪಿಕೊಳ್ಳಬಹುದು ಎಂಬ ನಿರೀಕ್ಷೆಗಳು ಹೆಚ್ಚಿವೆ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 75 ಡಾಲರ್‌ಗಳನ್ನು ಮೀರಿವೆ. ತೈಲ ಬೆಲೆಯಲ್ಲಿ ಏರಿಕೆಯಾದಾಗಲೆಲ್ಲಾ ಚಿಲ್ಲರೆ ಹಣದುಬ್ಬರಕ್ಕೆ ದಾರಿಯಾಗುತ್ತದೆ.