ನವದೆಹಲಿ: ಕಳೆದ ವರ್ಷದ ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದಾಗಿ ವಲಸೆ ಕಾರ್ಮಿಕರಿಗೆ ಆಸರೆಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ಸಾಕಷ್ಟು ಬೇಡಿಕೆಯಿತ್ತು. ಬದಲಾದ ಈಗಿನ ಸನ್ನಿವೇಶಕ್ಕೆ ಗ್ರಾಮೀಣ ಪ್ರದೇಶಗಳಲ್ಲಿನ ಕೆಲಸದ ಬೇಡಿಕೆಯ ಬೆಳವಣಿಗೆಯ ದರ ಕಳೆದ ಎರಡು ತಿಂಗಳಲ್ಲಿ ನಿರಂತರವಾಗಿ ನಿಧಾನವಾಗುತ್ತಿದೆ ಇತ್ತೀಚಿನ ಅಧಿಕೃತ ಅಂಕಿ - ಅಂಶಗಳಿಂದ ತಿಳಿದು ಬಂದಿದೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದ ಸರ್ಕಾರ, ಎಂಜಿಎನ್‌ಆರ್‌ಇಜಿಎ ಅಡಿ ಕೆಲಸದ ಬೇಡಿಕೆಯ ಬೆಳವಣಿಗೆಯ ದರವು ಅರ್ಧದಷ್ಟು ಕಡಿಮೆಯಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಶೇ 56ರಷ್ಟು ಇದ್ದದ್ದು ಈ ವರ್ಷದ ಫೆಬ್ರವರಿಯಲ್ಲಿ ಕೇವಲ ಶೇ 29ಕ್ಕೆ ಇಳಿದಿದೆ.
2020ರ ಡಿಸೆಂಬರ್‌ನಲ್ಲಿ 2.65 ಕೋಟಿಗೂ ಅಧಿಕ ಗ್ರಾಮೀಣ ಕುಟುಂಬಗಳು ಈ ಯೋಜನೆಯಡಿ ತೊಡಗಿಸಿಕೊಂಡಿದ್ದವು. ಹಿಂದಿನ ವರ್ಷದ ಇದೇ ತಿಂಗಳಲ್ಲಿನ 1.7 ಕೋಟಿ ಗ್ರಾಮೀಣ ಕುಟುಂಬಗಳಿಗೆ ಹೋಲಿಸಿದರೇ ಇದು ವರ್ಷದಿಂದ ವರ್ಷಕ್ಕೆ ಶೇ 56ರಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: ಭಾರತದ ಕೋವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ ನೇಪಾಳ!
ಕಳೆದ ವರ್ಷ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದರು. ನಗರಗಳಿಂದ ಗ್ರಾಮೀಣ ಪ್ರದೇಶಗಳತ್ತ ವಾಪಸಾದ ವಲಸಿಗ ಕಾರ್ಮಿಕರಿಂದ ದೊಡ್ಡ ಪ್ರಮಾಣದಲ್ಲಿ ಕೆಲಸದ ಬೇಡಿಕೆ ಕಂಡು ಬಂತು.
ತವರಿಗೆ ಮರಳಿದ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವ ಸಲುವಾಗಿ, ಕೇಂದ್ರ ಸರ್ಕಾರವು ಎಂಜಿಎನ್‌ಆರ್‌ಇಜಿಎ ಹಂಚಿಕೆಯನ್ನು 61,500 ಕೋಟಿ ರೂ.ಗಳಿಂದ 1,11,500 ಕೋಟಿ ರೂ.ಗೆ ಹೆಚ್ಚಿಸಿದೆ ಎಂದು 2020-21ನೇ ಸಾಲಿನ ಪರಿಷ್ಕೃತ ಅಂದಾಜಿನಲ್ಲಿ ತಿಳಿಸಲಾಗಿದೆ.
ಉತ್ತಮ ಉದ್ಯೋಗಾವಕಾಶಗಳ ಹುಡುಕಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಳಿದ ವಲಸೆ ಕಾರ್ಮಿಕರು ಅಂತಿಮವಾಗಿ ನಗರ ಮತ್ತು ಮಹಾನಗರಗಳಿಗೆ ಹಿಂತಿರುಗುತ್ತಾರೆ ಎಂಬ ನಿರೀಕ್ಷೆಯಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಂಜಿಎನ್‌ಆರ್‌ಇಜಿಎಯ ಬಜೆಟ್ ಹಂಚಿಕೆಯನ್ನು 38,500 ಕೋಟಿ ರೂ.ಯಿಂದ ಕಡಿತಗೊಳಿಸಿದ್ದಾರೆ. 2020-21ನೇ ಸಾಲಿನ 1,11,500 ಕೋಟಿ ರೂ.ಯಿಂದ 2021-22ನೇ ಸಾಲಿನವರೆಗೆ 73,000 ಕೋಟಿ ರೂ. ನಿಗದಿಪಡಿಸಿ, ಶೇ 34.5ರಷ್ಟು ಕಡಿತಗೊಳಿಸಿದರು.