ನವದೆಹಲಿ: ಕೊರೊನಾ ವೈರಸ್ ಹಬ್ಬುವಿಕೆ ಮತ್ತು ಹೆಚ್ಚಿನ ವಸೂಲಾಗದ ಸಾಲದಿಂದ ಬ್ಯಾಂಕಿಂಗ್ ವಲಯದ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೂಡಿಸ್ ಇನ್ವೆಸ್ಟರ್ ಸರ್ವಿಸ್ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ದೃಷ್ಟಿಕೋನವನ್ನು ನಕಾರಾತ್ಮಕವಾಗಿ ಬದಲಾಯಿಸಿದೆ.
ಕಾರ್ಪೊರೇಟ್, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ಚಿಲ್ಲರೆ ವಿಭಾಗಗಳಲ್ಲಿ ಬ್ಯಾಂಕ್ಗಳ ಆಸ್ತಿಯ ಗುಣಮಟ್ಟ ಹದಗೆಡುತ್ತದೆ. ಇದು ಲಾಭದಾಯಕತೆ ಮತ್ತು ಬಂಡವಾಳದ ಮೇಲಿನ ಒತ್ತಡಕ್ಕೆ ಕಾರಣವಾಗುತ್ತದೆ ಎಂದು ಮೂಡಿಸ್ ತನ್ನ ವರದಿಯಲ್ಲಿ ತಿಳಿಸಿದೆ.
ನಾವು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ದೃಷ್ಟಿಕೋನವನ್ನು ಸ್ಥಿರದಿಂದ ಋಣಾತ್ಮಕವಾಗಿ ಬದಲಾಯಿಸಿದ್ದೇವೆ. ಕೊರೊನಾ ವೈರಸ್ ಏಕಾಏಕಿ ಆರ್ಥಿಕ ಚಟುವಟಿಕೆಗಳಿಗೆ ಉಂಟು ಮಾಡಲಿರುವ ಅಡೆತಡೆಗಳು ಭಾರತದ ಆರ್ಥಿಕ ಬೆಳವಣಿಗೆಯ ಮಂದಗತಿಯನ್ನ ಇನ್ನಷ್ಟು ಹೆಚ್ಚಿಸುತ್ತದೆ ಎಂದು ಹೇಳಿದೆ.
ಮೂಡಿಸ್ ಪ್ರಕಾರ, ಜಾಗತಿಕ ಆರ್ಥಿಕ ಪರಿಸ್ಥಿತಿಗಳ ಕುಸಿತ ಮತ್ತು ಕೋವಿಡ್ 19 ವೈರಸ್ ಹರಡುವಿಕೆ ತಗ್ಗಿಸುವ ಪ್ರಯತ್ನವಾಗಿ ಭಾರತ ಸರ್ಕಾರವು ವಿಧಿಸಿರುವ 21 ದಿನಗಳ ಲಾಕ್‌ಡೌನ್ ದೇಶಿಯ ಬೇಡಿಕೆ ಮತ್ತು ಖಾಸಗಿ ಹೂಡಿಕೆಯ ಮೇಲೆ ತೂಗು ಕತ್ತಿಯಾಗಿದೆ.
ಇದಲ್ಲದೇ ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಚಂಚಲತೆಯಿಂದಾಗಿ ಆರ್ಥಿಕತೆಗೆ ಸಾಲ ಪೂರೈಕೆಯು ಅಡ್ಡಿಯಾಗುತ್ತದೆ. ಖಾಸಗಿ ಬ್ಯಾಂಕ್ಗಳ ಯೆಸ್ ಬ್ಯಾಂಕ್ ಲಿಮಿಟೆಡ್ ಸಾಲದ ವಂಚನೆ ಬೆಳಕಿಗೆ ಬಂದ ಬಳಿಕ ಭಾರತೀಯ ಬ್ಯಾಂಕ್ಗಳಲ್ಲಿ ಅಪಾಯ ನಿವಾರಣೆ ಮತ್ತು ಸಾಲ ಮಾರುಕಟ್ಟೆ ಭಾಗವಹಿಸುವಿಕೆ ಹೆಚ್ಚಾಗುತ್ತದೆ ಎಂದಿದೆ.
ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಒತ್ತಡವು ಸಾಲ ನೀಡುವ ಸಾಮರ್ಥ್ಯವನ್ನು ಮೊಟಕುಗೊಳಿಸುತ್ತದೆ. ಈ ಅಂಶಗಳು ಭಾರತದ ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ಅಡ್ಡಿಯಾಗುತ್ತವೆ. ಆರ್ಥಿಕ ಚಟುವಟಿಕೆಯಲ್ಲಿ ತೀವ್ರ ಕುಸಿತ ಮತ್ತು ನಿರುದ್ಯೋಗದ ಹೆಚ್ಚಳವು ಗೃಹ ಮತ್ತು ಕಾರ್ಪೊರೇಟ್ ಹಣಕಾಸು ಕ್ಷೀಣಿಸಲು ಕಾರಣವಾಗುತ್ತದೆ. ಇದರಿಂದಾಗಿ ಅಪರಾಧಗಳು ಹೆಚ್ಚಾಗುತ್ತವೆ ಎಂದು ಅದು ಹೇಳಿದೆ.