ಬೆಂಗಳೂರು: ದೇಶದಲ್ಲಿ ಉಂಟಾಗಿರುವ ನಿಧಾನಗತಿ ಆರ್ಥಿಕ ಬೆಳವಣಿಗೆಯ ಕೆಟ್ಟ ಪರಿಣಾಮ ರಾಜ್ಯದಲ್ಲಿನ ಸಣ್ಣ ಕೈಗಾರಿಕಗಳ ಮೇಲೂ ಆಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಅಧ್ಯಕ್ಷ ಆರ್. ರಾಜು ಆತಂಕ ವ್ಯಕ್ತಪಡಿಸಿದ್ರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 5.5 ರಿಂದ 6 ಲಕ್ಷ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿವೆ. ಅದರಲ್ಲಿ ಸುಮಾರು ಶೇ 50ರಿಂದ 60ರಷ್ಟು ಆಟೋಮೊಬೈಲ್ ವಲಯ ಅವಲಂಬಿತ ಉದ್ಯಮಗಳಿವೆ. ಸಣ್ಣ ಮತ್ತು ಮಧ್ಯಮ ವಲಯದ ಕಾರ್ಖಾನೆಗಳು ಕೆಲಸದ ದಿನಗಳನ್ನು ಕಡಿತಗೊಳಿಸಿವೆ. ಹೀಗಾಗಿ, ತಿಂಗಳಿಗೆ ಕೇವಲ ಹತ್ತು ದಿನ ಕೆಲಸ ನಿರ್ವಹಿಸುತ್ತಿರುವ ಕಾರಣ 15ರಿಂದ 20 ಲಕ್ಷ ಕಾರ್ಮಿಕರು ಬೀದಿ ಪಾಲಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ರು.
ಆಟೋಮೊಬೈಲ್, ಜವಳಿ ಉದ್ಯಮ ಸಹ ಆರ್ಥಿಕ ಕುಸಿತದ ಪರಿಣಾಮದಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ದೊಡ್ಡ ವಾಹನ ತಯಾರಿಕಾ ಕಂಪನಿಗಳಾದ ಹೋಂಡಾ, ಟಾಟಾದಂತಹ ಸಂಸ್ಥೆಗಳು ತಮ್ಮ ಉತ್ಪಾದನೆಯನ್ನು ಶೇ 50ರಷ್ಟು ಕಡಿತಗೊಳಿಸಿವೆ. ಇದರಿಂದಾಗಿ ಸಣ್ಣ-ಸಣ್ಣ ಉದ್ಯಮಿದಾರರು ನಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಅವರ ಮುಂದೆ ಈ ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ ಎಂದರು.
ಆರ್ಥಿಕ ಕುಸಿತವು ಇನ್ನೂ ಕೆಲವು ಸಮಯದವರೆಗೆ ಮುಂದುವರಿಯಲಿದೆ. ಪ್ರಸ್ತುತ ಸ್ಥಿತಿಗಿಂತ ಪರಿಣಾಮ ಇನ್ನಷ್ಟು ಹದಗೆಡಲಿದೆ ಎಂದು ರಾಜು ಗಂಭೀರ ಎಚ್ಚರಿಕೆ ನೀಡಿದ್ರು.
ಸಣ್ಣ ಉದ್ಯಮಿಗಳಿಗೆ ಶೇ 4ರ ಬಡ್ಡಿದರದಲ್ಲಿ ಸಾಲ ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಖಾಸಗಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ, ಅಸ್ತಿತ್ವದಲ್ಲಿರುವ ಕೈಗಾರಿಕಾ ಪ್ರದೇಶಗಳ ಮೂಲಸೌಕರ್ಯಾಭಿವೃದ್ಧಿ, ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿಯ ಜೊತೆಗೆ ಟೌನ್ಶಿಪ್ ಪ್ರಾಧಿಕಾರದ ಮಾನ್ಯತೆ, ಜಿಎಸ್ಟಿ ಸಂಬಂಧಿತ ತೊಂದರೆಗಳಿಂದ ಕೈಗಾರಿಕೆಗಳಿಗೆ ಮುಕ್ತಿ, ಕೈಗಾರಿಕಾ ವಿಕೇಂದ್ರೀಕರಣ ಸೇರಿದಂತೆ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡುವಂತೆ ಕೋರಿದ್ದೇವೆ ಎಂದು ಮಾಹಿತಿ ಒದಗಿಸಿದ್ರು.