ನವದೆಹಲಿ : ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಝುಕಿ ಇಂಡಿಯಾ ತನ್ನ ವಾಹನ ಚಂದಾದಾರಿಕೆ ಕಾರ್ಯಕ್ರಮವನ್ನು ಮುಂಬೈ, ಚೆನ್ನೈ, ಅಹಮದಾಬಾದ್ ಮತ್ತು ಗಾಂಧಿನಗರಗಳಿಗೆ ವಿಸ್ತರಿಸುವುದಾಗಿ ಪ್ರಕಟಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಇದನ್ನು 60 ನಗರಗಳಲ್ಲಿ ವಿಸ್ತರಿಸುವ ಯೋಜನೆ ಇದೆ ಎಂದು ತಿಳಿಸಿದೆ.
ಈ ಹಿಂದೆ ದೆಹಲಿ-ಎನ್‌ಸಿಆರ್, ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಮಾರುತಿ ಸುಝುಕಿ ಚಂದಾದಾರಿಕೆಯನ್ನು ಪ್ರಾರಂಭಿಸಿತ್ತು. ಈಗ ಈ ಕಾರ್ಯಕ್ರಮವನ್ನು ಮುಂಬೈ (ನವ ಮುಂಬೈ ಮತ್ತು ಥಾಣೆ ಸೇರಿದಂತೆ), ಚೆನ್ನೈ, ಅಹಮದಾಬಾದ್ ಮತ್ತು ಗಾಂಧಿನಗರ ಸೇರಿದಂತೆ ನಾಲ್ಕು ನಗರಗಳಿಗೆ ವಿಸ್ತರಿಸಲಾಗಿದೆ ಎಂದು ಮಾರುತಿ ಸುಝುಕಿ ಇಂಡಿಯಾ (ಎಂಎಸ್ಐ) ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಬಿಲ್ ಗೇಟ್ಸ್ ಹಿಂದಿಕ್ಕಿ ವಿಶ್ವದ 2 ನೇ ಶ್ರೀಮಂತ ವ್ಯಕ್ತಿಯಾದ ಎಲೋನ್ ಮಸ್ಕ್
ಈ ನಾಲ್ಕು ನಗರಗಳಲ್ಲಿ ವೈಯಕ್ತಿಕ ಗ್ರಾಹಕರಿಗೆ ಸೇವೆಯನ್ನು ಪರಿಚಯಿಸಲು ಕಂಪನಿಯು ಜಪಾನ್‌ನ ಒರಿಕ್ಸ್ ಕಾರ್ಪೊರೇಶನ್‌ನ ಅಂಗಸಂಸ್ಥೆಯಾದ ಒರಿಕ್ಸ್ ಆಟೋ ಇನ್ಫ್ರಾಸ್ಟ್ರಕ್ಚರ್ ಸರ್ವೀಸಸ್ ಇಂಡಿಯಾದೊಂದಿಗೆ ಪಾಲುದಾರಿಕೆ ಹೊಂದಿದೆ.
ಉಪಕ್ರಮದಡಿಯಲ್ಲಿ ಮಾರುತಿ ಸುಝುಕಿ ಚಂದಾದಾರರಾಗಿ, ಗ್ರಾಹಕರು ಹೊಚ್ಚ ಹೊಸ ಕಾರನ್ನು ಮಾಸಿಕ ಶುಲ್ಕ ಪಾವತಿಸುವ ಅವಕಾಶ ಪಡೆಯಬಹುದು. ಇದರಲ್ಲಿ ಸಂಪೂರ್ಣ ನಿರ್ವಹಣಾ ವೆಚ್ಚ ಮತ್ತು ವಿಮೆ ಕೂಡ ಒಳಗೊಂಡಿರುತ್ತದೆ.
ಚಂದಾದಾರಿಕೆ ಕಾರ್ಯಕ್ರಮ ಪ್ರಾರಂಭದಲ್ಲೇ 6,600ಕ್ಕೂ ಗ್ರಾಹಕರು ಈ ಬಗ್ಗೆ ವಿಚಾರಿಸಿದ್ದಾರೆ. ಜನರಿಂದ ಹೊಸ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಎಂಎಸ್ಐ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೇಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.