ಮುಂಬೈ: ಟಾಪ್ -500 ಸರ್ಕಾರೇತರ ಕಂಪನಿಗಳ ಜಾಗತಿಕ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅತ್ಯಂತ ಮೌಲ್ಯಯುತ ಭಾರತೀಯ ಕಂಪನಿಯಾಗಿ ಹೊರಹೊಮ್ಮಿದೆ. ಆದರೆ, ಅದರ ಒಟ್ಟಾರೆ ಶ್ರೇಯಾಂಕವು ಈ ಬಾರಿ ಮೂರು ಸ್ಥಾನಗಳ ಕುಸಿತ ಕಂಡಿದೆ.
ರಿಲಯನ್ಸ್ ಜೊತೆಯಲ್ಲಿ ಭಾರತದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್), ಹೆಚ್‌ಡಿಎಫ್‌ಸಿ ಬ್ಯಾಂಕ್, ಭಾರತಿ ಏರ್‌ಟೆಲ್, ಕೊಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ 12 ಭಾರತೀಯ ಕಂಪನಿಗಳು ಟಾಪ್ - 500ರಲ್ಲಿ ಸ್ಥಾನ ಪಡೆದಿವೆ. ಆದರೆ ಇವುಗಳ ಶ್ರೇಯಾಂಕವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕುಸಿತ ಕಂಡಿವೆ.
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ವಹಿವಾಟು ಶೇ.11ರಷ್ಟು (188 ಶತಕೋಟಿ ಡಾಲರ್) ಏರಿಕೆಯಾಗಿದೆ. ಆದರೆ ಶ್ರೇಯಾಂಕದಲ್ಲಿ ಮೂರು ಸ್ಥಾನಗಳ ಕುಸಿತದಿಂದಾಗಿ 57ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಟಿಸಿಎಸ್ ಕಂಪನಿಯು 164 ಬಿಲಿಯನ್ ಡಾಲರ್ ಆದಾಯದೊಂದಿಗೆ 74ನೇ ಸ್ಥಾನ ಪಡೆದಿದೆ.
ಇದನ್ನೂ ಓದಿ: ಟಾಟಾ ಗ್ರೂಪ್‌ಗೆ ಎಸ್&ಪಿಯಲ್ಲಿ ಉತ್ತಮ ರೇಟಿಂಗ್ ನೀಡಿದ ಕ್ರೆಡಿಟ್ ವಾಚ್
ಕೊಟಕ್ ಮಹೀಂದ್ರಾ ಬ್ಯಾಂಕಿನ ಆದಾಯ ಶೇ. 8 ರಷ್ಟು ಕುಸಿದಿದ್ದು, 46.6 ಶತಕೋಟಿ ಡಾಲರ್ನೊಂದಿಗೆ 380ನೇ ಸ್ಥಾನ ಗಳಿಸಿದರೆ, ಅದರ ಪ್ರತಿಸ್ಪರ್ಧಿ ಐಸಿಐಸಿಐ ಬ್ಯಾಂಕ್ ತನ್ನ ವಹಿವಾಟಿನಲ್ಲಿ ಶೇ.36ರಷ್ಟು ಏರಿಕೆ ಕಂಡು, 62 ಶತಕೋಟಿ ಡಾಲರ್ನೊಂದಿಗೆ 268ನೇ ಸ್ಥಾನಕ್ಕೇರಿದೆ.
ಇನ್ನು ಆ್ಯಪಲ್, ಮೈಕ್ರೋಸಾಫ್ಟ್, ಅಮೆಜಾನ್ ಕಂಪನಿಗಳು ಕೋವಿಡ್ ಸಂದರ್ಭದಲ್ಲೂ ತಮ್ಮ ಆದಾಯ ದ್ವಿಗುಣಗೊಳಿಸಿ, 8 ಟ್ರಿಲಿಯನ್ ಡಾಲರ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿವೆ.