ಬೆಂಗಳೂರು : ರಾಜ್ಯ ಸರ್ಕಾರ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್ ಜೂನ್ 7ರವರೆಗೆ ವಿಸ್ತರಣೆ ಮಾಡಿರುವುದು ಆರ್ಥಿಕ ಚಟುವಟಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಕೈಗಾರಿಕೆ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.
ಲಾಕ್‌ಡೌನ್ ಪರಿಹಾರ ಕಳೆದ ವಾರ ಘೋಷಣೆ ಮಾಡಿದ್ದು, ಎಲ್ಲಾ ವರ್ಗದ ಜನರಿಗೆ ತಲುಪಿಲ್ಲ ಎಂದು ಈಗಾಗಲೇ ವಾದವಿತ್ತು. ಅಂಗಡಿ ಮಾಲೀಕರು, ಕೈಗಾರಿಕೆಗಳು ಹಾಗೂ ಇನ್ನಿತರೆ ಆರ್ಥಿಕ ಚಟುವಟಿಕೆ ಉದ್ಯಮಿಗಳು ಜಿಎಸ್ಟಿ, ಆದಾಯ ತೆರಿಗೆ, ಸಾಲದ ಕಂತು ಸೇರಿ ಹಲವು ಜವಾಬ್ದಾರಿ ನಿಭಾಯಿಸಬೇಕು.
ಸರ್ಕಾರ ವಿದ್ಯುತ್ ದರ, ನೀರಿನ ದರ ಕಟ್ಟಲು ರಿಯಾಯಿತಿ ನೀಡಬೇಕು ಎಂದು ಎಫ್ಕೆಸಿಸಿಐ ಅಧ್ಯಕ್ಷ ಪೇರಿಕಲ್ ಸುಂದರ್ ಆಗ್ರಹಿಸಿದ್ದಾರೆ. ಲಾಕ್‌ಡೌನ್ ವಿಸ್ತರಣೆ ಆರ್ಥಿಕ ಚಟುವಟಿಕೆಗಳಿಗೆ ಕೊಡಲಿಪೆಟ್ಟು ನೀಡಿದಂತೆ ಆಗಲಿದೆ.
ಉದ್ಯಮಿಗಳು ನೌಕರರಿಗೆ ಯಾವುದೇ ವ್ಯಾಪಾರ, ವಹಿವಾಟು ಇಲ್ಲದೆ ಸಂಬಳ ನೀಡುವುದು ಅಸಾಧ್ಯವಾಗುತ್ತದೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನೆಲ ಕಚ್ಚುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಟ್ರೈಡೆಂಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವಿ ಹೇಳಿದ್ದಾರೆ.
ಸದ್ಯಕ್ಕೆ ಹೋಟೆಲ್ಗಳಲ್ಲಿ ಕೇವಲ ಡೆಲಿವರಿ ಹಾಗೂ ಪಾರ್ಸಲ್ ಆಧಾರದಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಒಪ್ಪಿದೆ. ಇದರಿಂದ ಹೋಟೆಲ್ ಉದ್ಯಮ ನಷ್ಟದಲ್ಲೇ ಉಳಿದಿದೆ ಹೊರತು ಯಾವುದೇ ಲಾಭಾಂಶ ಇಲ್ಲ. ದಿನನಿತ್ಯದ ಖರ್ಚು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಬೇಸರ ವ್ಯಕ್ತಪಡಿಸಿದ್ದಾರೆ.