ಬೆಂಗಳೂರು: ವಿಶ್ವದಾದ್ಯಂತ ಆರ್ಥಿಕ ಹಿಂಜರಿತದ ವಿಷವರ್ತುಲ ಎಲ್ಲೆಡೆ ಆವರಿಸಿಕೊಂಡಿದೆ. ಅದರ ಬಿಸಿ ಭಾರತಕ್ಕೂ ತಟ್ಟಿದೆ. ನೂರಾರು ಬಹುರಾಷ್ಟ್ರೀಯ ಕಂಪನಿಗಳು ಆರ್ಥಿಕ ಹಿಂಜರಿತದಿಂದ ಪಾರಾಗಲು ತನ್ನ ನೌಕರರನ್ನು ಕೆಲಸದಿಂದ ವಜಾಗೊಳಿಸುತ್ತಿವೆ. ಕಂಪನಿಗಳಲ್ಲಿನ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಏಕಾಏಕಿ ಕೆಲಸಕ್ಕೆ ಬರಬೇಡಿ ಎನ್ನುವುದಿಲ್ಲ. ಬದಲಿಗೆ ಇನ್ನೊಂದು ರೀತಿಯಲ್ಲಿ ಹಂತ- ಹಂತವಾಗಿ ಗೇಟ್ಪಾಸ್ ಕೊಡುತ್ತವೆ.
ಸಾಮಾನ್ಯವಾಗಿ ಭಾರತದಲ್ಲಿರುವ ಸಂಸ್ಥೆಗಳು ಬೇರೆ ರಾಷ್ಟ್ರಕ್ಕೆ ಕೆಲಸ ಮಾಡುತ್ತಿವೆ. ಇದಕ್ಕೆ ಹೊರಗುತ್ತಿಗೆ (ಔಟ್ಸೋರ್ಸಿಂಗ್ ಜಾಬ್) ಎನ್ನುತ್ತಾರೆ. ಉದಾ: ಇನ್ಫೋಸಿಸ್ ಸಂಸ್ಥೆಯು ಪ್ಯಾನಸೋನಿಕ್ ಅಥವಾ ಇನ್ನಿತರ ಸಂಸ್ಥೆಗಳಿಗೆ ಸಾಫ್ಟ್‌ವೇರ್ ತಯಾರು ಮಾಡುತ್ತದೆ. ಯಾವಾಗ ಕೆಲಸ ಕೊಡುವ ಸಂಸ್ಥೆಗಳು ಪ್ರಾಜೆಕ್ಟ್ ನಿಲ್ಲಿಸುತ್ತವೆಯೋ ಆಗ ಔಟ್ಸೋರ್ಸಿಂಗ್ ಪಡೆದ ಸಂಸ್ಥೆಯು ಅಧಿಕ ನೌಕರರನ್ನು ತೆಗೆಯಲು ನಿರ್ಧರಿಸುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ವಿಪ್ರೋದ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯೊಬ್ಬರು ಕೆಲಸದಿಂದ ನೌಕರರನ್ನು ಹೇಗೆ ವಜಾಗೊಳಿಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ.
ಸಾಫ್ಟ್‌ವೇರ್ ವಲಯದಲ್ಲಿ ಮುಖ್ಯವಾಗಿ ಸಾಫ್ಟ್‌ವೇರ್ ಟೆಸ್ಟರ್ಸ್, ನೆಟ್ವರ್ಕ್ ಇಂಜಿನಿಯರ್ಸ್ ಹಾಗೂ ಸಾಫ್ಟ್‌ವೇರ್ ಡೆವಲಪರ್ಸ್ ಇರುತ್ತಾರೆ. ಸಂಸ್ಥೆಗಳಲ್ಲಿ ಪ್ರಸ್ತುತ ಶೇ. 8ರಿಂದ 10ರಷ್ಟು ನೌಕರರನ್ನು ತೆಗೆಯುವ ಪ್ರಸ್ತಾವನೆ ಇದೆ. ಏಕಾಏಕಿ ಕೆಲಸದಿಂದ ಉದ್ಯೋಗಿಗಳನ್ನು ತೆಗೆಯುವುದಿಲ್ಲ. ನೌಕರರಿಗೆ ಪರೋಕ್ಷವಾಗಿ ಸೂಚನೆ ನೀಡುತ್ತಾರೆ. ಕೆಲಸ ವಜಾ ಸುಳಿವು ಅರಿತ ನೌಕರರು ಬೇರೆ ಕಡೆ ಕೆಲಸ ಹುಡುಕಲು ಆರಂಭಿಸುತ್ತಾರೆ.
ಸುಳಿವು ನೀಡುವ ರೀತಿ
* ಅಪ್ರೈಸಲ್ (ವಾರ್ಷಿಕ ಸಂಬಳ ಏರಿಕೆಯ ಸ್ಥಗಿತ)
* ಕೆಲಸದ ಒತ್ತಡ ಹೆಚ್ಚಿಸುವುದು
* ವಾರಕ್ಕೆ 5 ದಿನ ಕೆಲಸ ಕೊಡುತ್ತಿದ್ದ ನೌಕರರಿಗೆ 6 ಅಥವಾ 7 ದಿನ ಕೆಲಸ ಮಾಡಲು ಸೂಚನೆ
* ವಹಿಸಿದ ಪ್ರಾಜೆಕ್ಟ್ ಮುಗಿದ ಬಳಿಕ 3 ತಿಂಗಳ ಕಾಲ ಯಾವುದೇ ಕೆಲಸ ನೀಡದೆ ಕಾಯಿಸುವುದು
ಏನಿದು ಕಾಯುವಿಕೆ (ಬೆಂಚ್)?: ಕೆಲಸ ಇಲ್ಲದ ನೌಕರನನ್ನು ಕೇವಲ ಒಂದು ಆಫೀಸ್ನ ಒಂದು ಕೋಣೆಯಲ್ಲಿ ಇರುವಂತೆ ಸೂಚಿಸಲಾಗುತ್ತದೆ. ಅದು ನೌಕರನ ಕೆಲಸದ ಜಾಗ. ಲೋಕಾರೂಢಿಯಾಗಿ ಹೇಳುವುದಾದರೆ ಸುಖಾ ಸುಮ್ಮನೆ ಕೂಡಿಸಿ ಸಂಬಳ ನೀಡುವುದು. ನೌಕರನಿಗೆ ಇಂದೊಂದು ಮಾನಸಿಕ ಯಾತನೆಯಂತೆ ಆಗುತ್ತದೆ. ಬೆಂಚ್ ಅಂದ್ರೆ ಅದು 'ದಿ ಡೆಡ್ ಎಂಡ್' ಎಂದೂ ಹೇಳಬಹುದು. ಮುಂದೊಂದು ದಿನ ಹೆಚ್ಆರ್ ಬಂದು, 'ಬೇರೆ ಕಡೆ ಕೆಲಸ ಹುಡಿಕಿಕೊಳ್ಳಿ. ನಾವು ನಿಮ್ಮ ಕೆಲಸದ ಬಗ್ಗೆ ಉತ್ತಮ ಶಿಫಾರಸು ಪತ್ರ ನೀಡುತ್ತೇವೆ. ನಿಮಗೆ ಬರಬೇಕಾದ ಎಲ್ಲಾ ಹಣವನ್ನು ನೀಡಲಾಗುವುದು' ಎಂಬ ಭರವಸೆ ನೀಡುತ್ತಾರೆ. ಇದರ ಜೊತೆಗೆ 45 ದಿನದ ಸಂಬಳ ಸಹ ನೀಡುತ್ತಾರೆ ಎಂಬುದು ಹೆಚ್ಆರ್ ಮೂಲಗಳು ತಿಳಿಸಿವೆ.
ಯಾರಿಗೆ ಕೆಲಸದ ಅಭದ್ರತೆಯ ಭಯ?: ಮೊದಲು ಟಾರ್ಗೆಟ್ ಆಗುವುದು ಒಪ್ಪಂದದ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಗಳು. ನಂತರ 2 ವರ್ಷಕ್ಕಿಂತ ಕಡಿಮೆ ಅನುಭವ ಹೊಂದಿರುವ ಹೊಸಬರು ಹಾಗೂ 5 ವರ್ಷದಿಂದ ಕೆಲಸದಲ್ಲಿ ಪ್ರಗತಿಯನ್ನು ಹೊಂದದ ಉದ್ಯೋಗಿಗಳು.
ಕೆಲಸ ಹೋದನಂತರ ಏನು ಮಾಡಬೇಕು?: ಮೊದಲಿಗೆ ಹೇಳಿದಹಾಗೆ ಸಂಸ್ಥೆಯ ಆಗು ಹೋಗುಗಳ ಬಗ್ಗೆ ಉದ್ಯೋಗಿಗಳು ಆಗಾಗ ಅರಿತಿರಬೇಕು. ಲಿಂಕ್ಡ್ಇನ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಅವರ ಪ್ರೊಫೈಲ್ ಅಪ್ ಡೇಟ್ ಮಾಡಿರಬೇಕು. ಸಾಫ್ಟವೇರ್ ವಲಯದಲ್ಲಿ ಏನು ಹೊಸ ಬದಲಾವಣೆ ಆಗುತ್ತಿವೆ ಎಂಬುದನ್ನು ಕೂಲಂಕಶವಾಗಿ ಗಮನಿಸುತ್ತಾ ಇರಬೇಕು.