ನವದೆಹಲಿ: ʻಭಾರತದ ಎಸ್ಡಿಜಿ ಸೂಚ್ಯಂಕ ಮತ್ತು ಡ್ಯಾಶ್ಬೋರ್ಡ್-2020-21ʼ ಮೂರನೇ ಆವೃತ್ತಿಯನ್ನು ನೀತಿ ಆಯೋಗವು ಬಿಡುಗಡೆ ಮಾಡಿತು.
ನೀತಿ ಆಯೋಗದ ಎಸ್‌ಡಿಜಿ ಇಂಡಿಯಾ ಇಂಡೆಕ್ಸ್ 2020-21ರಲ್ಲಿ ಕೇರಳ ಅಗ್ರ ಶ್ರೇಯಾಂಕ ಉಳಿಸಿಕೊಂಡಿದ್ದರೆ, ಬಿಹಾರವನ್ನು ಅತ್ಯಂತ ಕೆಟ್ಟ ಪ್ರದರ್ಶನ ನೀಡಿದೆ. ಸಾಮಾಜಿಕ, ಆರ್ಥಿಕ ಮತ್ತು ಪರಿಸರ ನಿಯತಾಂಕಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಗತಿಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕ (ಎಸ್‌ಡಿಜಿ) ಮೌಲ್ಯಮಾಪನ ಮಾಡುತ್ತದೆ.
ಕೇರಳ 75 ಅಂಕಗಳೊಂದಿಗೆ ಅಗ್ರ ರಾಜ್ಯವಾಗಿ ತನ್ನ ಸ್ಥಾನ ಉಳಿಸಿಕೊಂಡಿದೆ. ಹಿಮಾಚಲ ಪ್ರದೇಶ ಮತ್ತು ತಮಿಳುನಾಡು ಎರಡೂ 74 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡವು. ಕರ್ನಾಟಕ, ಆಂಧ್ರಪ್ರದೇಶ, ಗೋವಾ ಮತ್ತು ಉತ್ತರಖಂಡ್ ತಲಾ 72 ಅಂಕಗಳಿಂದ 3ನೇ ಸ್ಥಾನದಲ್ಲಿ ಇದ್ದರೇ ಸಿಕ್ಕಿಂ, ಮಹಾರಾಷ್ಟ್ರ ಮತ್ತು ಗುಜರಾತ್ ಅನುಕ್ರಮವಾಗಿ 71, 70 ಮತ್ತು 69 ಅಂಕಗಳು ಪಡೆದಿವೆ. ಈ ವರ್ಷದ ಸೂಚ್ಯಂಕದಲ್ಲಿ ಬಿಹಾರ, ಜಾರ್ಖಂಡ್ ಮತ್ತು ಅಸ್ಸೋಂ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ ರಾಜ್ಯಗಳಾಗಿವೆ.
2018ರ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿದಾಗಿನಿಂದಲೂ ಈ ಸೂಚ್ಯಂಕವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾಧಿಸಿರುವ ದೇಶದ ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಿ, ಸಮಗ್ರವಾಗಿ ದಾಖಲಿಸಿ, ಶ್ರೇಯಾಂಕ ನೀಡುತ್ತಿದೆ. ಪ್ರಸ್ತುತ ಮೂರನೇ ಆವೃತ್ತಿಯಲ್ಲಿ ಪ್ರಕಟಗೊಳ್ಳುತ್ತಿರುವ ಈ ಸೂಚ್ಯಂಕವು ದೇಶದಲ್ಲಿ ಎಸ್ಡಿಜಿಗಳ ವಿಚಾರವಾಗಿ ಪ್ರಗತಿಯ ಮೇಲ್ವಿಚಾರಣೆಗೆ ಪ್ರಾಥಮಿಕ ಸಾಧನವಾಗಿದೆ. ಜೊತೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಸ್ಪರ್ಧಾತ್ಮಕತೆಯನ್ನೂ ಈ ಸೂಚ್ಯಂಕ ಬೆಳೆಸುತ್ತಿದೆ.
ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಅವರು ʻಭಾರತದ ಎಸ್ಡಿಜಿ ಸೂಚ್ಯಂಕ ಮತ್ತು ಡ್ಯಾಶ್ ಬೋರ್ಡ್ 2020-21: ದಶಕದ ಕಾರ್ಯಯೋಜನೆಯಲ್ಲಿ ಪಾಲುದಾರಿಕೆಗಳುʼ ಶೀರ್ಷಿಕೆಯ ವರದಿಯನ್ನು ನೀತಿ ಆಯೋಗದ ಸದಸ್ಯ ಡಾ. ವಿನೋದ್ ಪಾಲ್, ನೀತಿ ಆಯೋಗದ ಸಿಇಒ ಶ್ರೀ ಅಮಿತಾಬ್ ಕಾಂತ್ ಮತ್ತು ನೀತಿ ಆಯೋಗದ ಸಲಹೆಗಾರರಾದ (ಎಸ್ಡಿಜಿ) ಸನ್ಯುಕ್ತಾ ಸಮದ್ದಾರ್ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.
ಭಾರತದ ಎಸ್ಡಿಜಿ ಸೂಚ್ಯಂಕ ಮತ್ತು ಡ್ಯಾಶ್ಬೋರ್ಡ್ʼ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲ್ವಿಚಾರಣೆಯ ನಮ್ಮ ಪ್ರಯತ್ನವು ವಿಶ್ವದಾದ್ಯಂತ ವ್ಯಾಪಕವಾಗಿ ಗಮನ ಸೆಳೆದಿದ್ದು, ಮೆಚ್ಚುಗೆಗೆ ಒಳಪಟ್ಟಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಸಂಯೋಜಿತ ಸೂಚ್ಯಂಕವನ್ನು ಲೆಕ್ಕಹಾಕುವ ಮೂಲಕ ನಮ್ಮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶ್ರೇಯಾಂಕ ನೀಡುವ ನಿಟ್ಟಿನಲ್ಲಿ ಇದೊಂದು ಅಪರೂಪದ, ದತ್ತಾಂಶ ಚಾಲಿತ ಉಪಕ್ರಮವಾಗಿ ಉಳಿದಿದೆ. ಇದು ಮಹತ್ವಾಕಾಂಕ್ಷೆಯ ಮತ್ತು ಅನುಕರಣೆಯ ವಿಷಯವಾಗಿ ಉಳಿಯುತ್ತದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೇಲ್ವಿಚಾರಣೆ ಪ್ರಯತ್ನಗಳನ್ನು ಮುನ್ನಡೆಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಅವರು ವರದಿ ಬಿಡುಗಡೆ ಸಂದರ್ಭದಲ್ಲಿ ಹೇಳಿದರು.
2030ರ ಕಾರ್ಯಸೂಚಿಯನ್ನು ಸಾಧಿಸುವ ನಿಟ್ಟಿನಲ್ಲಿ ಮೂರನೇ ಒಂದು ಭಾಗದಷ್ಟು ಪ್ರಯಾಣವು ನಮ್ಮ ಹಿಂದೆ ಇರುವ ಹಿನ್ನೆಲೆಯಲ್ಲಿ, ಪ್ರಸಕ್ತ ಆವೃತ್ತಿಯ ಸೂಚ್ಯಂಕ ವರದಿಯು ಪಾಲುದಾರಿಕೆಯ ಮಹತ್ವವನ್ನು ಪ್ರಧಾನ ವಿಷಯವಾಗಿ ಕೇಂದ್ರೀಕರಿಸುತ್ತದೆ.
ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಮಾತನಾಡಿ, "ನಮ್ಮ ಎಸ್ಡಿಜಿಗಳ ಪ್ರಯತ್ನಗಳ ಸಮಯದಲ್ಲಿ ನಾವು ನಿರ್ಮಿಸಿರುವ ಮತ್ತು ಬಲಪಡಿಸಿದ ಪಾಲುದಾರಿಕೆಯನ್ನು ವರದಿ ಪ್ರತಿಬಿಂಬಿಸುತ್ತದೆ. ಸಹಯೋಗದ ಉಪಕ್ರಮಗಳು ಹೇಗೆ ಉತ್ತಮ ಫಲಿತಾಂಶಗಳು ಮತ್ತು ಹೆಚ್ಚಿನ ಪರಿಣಾಮಗಳಿಗೆ ದಾರಿ ಮಾಡುತ್ತವೆ ಎಂಬುದರ ಮೇಲೆ ವರದಿಯ ನಿರೂಪಣೆಯು ಬೆಳಕು ಚೆಲ್ಲುತ್ತದೆ ಎಂದು ಹೇಳಿದರು.
ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿನೋದ್ ಪಾಲ್ ಮಾತನಾಡಿ, ಒಟ್ಟಾಗಿ ಕೆಲಸ ಮಾಡುವ ಮೂಲಕ ಯಾರನ್ನೂ ಹಿಂದೆ ಉಳಿಯದಂತೆ ಕಾಯ್ದುಕೊಳ್ಳುವ, ಹೆಚ್ಚು ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಭವಿಷ್ಯವನ್ನು ನಾವು ನಿರ್ಮಿಸಬಹುದು ಎಂಬುದು ಸ್ಪಷ್ಟವಾಗಿದೆ" ಎಂದು ಹೇಳಿದರು.
"2018ರಲ್ಲಿ ಬಿಡುಗಡೆ ಮಾಡಲಾದ ಮೊದಲ ಆವೃತ್ತಿಯು 62 ಸೂಚಕಗಳೊಂದಿಗೆ 13 ಗುರಿಗಳನ್ನು ಒಳಗೊಂಡಿತ್ತು. ಆದರೆ ಮೂರನೇ ಆವೃತ್ತಿಯು 16 ಗುರಿಗಳ ಕುರಿತಾದ 115 ಪರಿಮಾಣಾತ್ಮಕ ಸೂಚಕಗಳು ಮತ್ತು 17 ಲಕ್ಷ್ಯಗಳ ಕುರಿತಾದ ಗುಣಾತ್ಮಕ ಮೌಲ್ಯಮಾಪನವನ್ನು ಒಳಗೊಂಡಿದೆ. ಈ ವಿಸ್ತರಣೆಯು ಈ ಪ್ರಮುಖ ಸಾಧನವನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ನಮ್ಮ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ" ಎಂದು ನೀತಿ ಆಯೋಗದ ಸಲಹೆಗಾರರಾದ (ಎಸ್ಡಿಜಿ) ಶ್ರೀಮತಿ ಸನ್ಯುಕ್ತಾ ಸಮದ್ದಾರ್ ಹೇಳಿದರು.
ದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಅಳವಡಿಕೆ ಮತ್ತು ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಪರ್ಧಾತ್ಮಕತೆ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಉತ್ತೇಜಿಸುವ ಅವಳಿ ಧ್ಯೇಯೋದ್ದೇಶಗಳನ್ನು ನೀತಿ ಆಯೋಗವು ಹೊಂದಿದೆ. ಈ ಸೂಚ್ಯಂಕವು ರಾಷ್ಟ್ರೀಯ ಆದ್ಯತೆಗಳಿಗೆ ಹೊಂದಿಕೊಂಡಂತೆ, 2030ರ ಕಾರ್ಯಸೂಚಿಯ ಅಡಿಯಲ್ಲಿ ಜಾಗತಿಕ ಗುರಿಗಳ ಸಮಗ್ರ ಸ್ವರೂಪದ ಅಭಿವ್ಯಕ್ತಿಯನ್ನು ಪ್ರತಿನಿಧಿಸುತ್ತದೆ. ಸೂಚ್ಯಂಕದ ನಮ್ಯ ಸ್ವರೂಪವು ಆರೋಗ್ಯ, ಶಿಕ್ಷಣ, ಲಿಂಗ, ಆರ್ಥಿಕ ಬೆಳವಣಿಗೆ, ಸಂಸ್ಥೆಗಳು, ಹವಾಮಾನ ಬದಲಾವಣೆ ಮತ್ತು ಪರಿಸರ ಸೇರಿದಂತೆ ಗುರಿಗಳ ವಿಸ್ತಾರವಾದ ಸ್ವರೂಪದ ಬಗ್ಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಗತಿಯನ್ನು ಅಳೆಯುವ ಸಿದ್ಧ ಸಾಧನವಾಗಿ ಮತ್ತು ನೀತಿ ಸಾಧನವಾಗಿ ಮಾರ್ಪಟ್ಟಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಅವುಗಳು ʻಭಾರತದ ಎಸ್ಡಿಜಿ ಸೂಚ್ಯಂಕʼದಲ್ಲಿ ಪಡೆದ ಅಂಕಗಳ ಮೇಲೆ ವರ್ಗೀಕರಿಸಲಾಗಿದೆ:
ಆಕಾಂಕ್ಷಿ: 0-49
ಕಾರ್ಯಕ್ಷಮತೆ ಪ್ರದರ್ಶಕ: 50-64
ಫ್ರಂಟ್-ರನ್ನರ್: 65-99
ಸಾಧಕ: 100
ದೇಶದ ಒಟ್ಟಾರೆ ಎಸ್ಡಿಜಿ ಸ್ಕೋರ್ 6 ಅಂಶಗಳಷ್ಟು ಸುಧಾರಿಸಿದೆ- 2019ರಲ್ಲಿ 60ರಿಂದ 2020-21ರಲ್ಲಿ 66ಕ್ಕೆ ಹೆಚ್ಚಿದೆ. ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಈ ಸಕಾರಾತ್ಮಕ ಮುನ್ನಡೆಯ ಪ್ರಮುಖ ಚಾಲಕ ಶಕ್ತಿ ಎಂದರೆ, ಗುರಿ 6 (ಶುದ್ಧ ನೀರು ಮತ್ತು ನೈರ್ಮಲ್ಯ) ಮತ್ತು ಗುರಿ 7 (ಕೈಗೆಟುಕುವ ಮತ್ತು ಶುದ್ಧ ಇಂಧನ) ವಿಚಾರದಲ್ಲಿ ದೇಶವ್ಯಾಪಿ ಸಾಧಿಸಲಾದ ಅತ್ಯುತ್ತಮ ಕಾರ್ಯಕ್ಷಮತೆ. ಈ ಎರಡೂ ಗುರಿಗಳಲ್ಲಿ ಕ್ರಮವಾಗಿ 83 ಮತ್ತು 92 ಸಂಯೋಜಿತ ಅಂಕಗಳನ್ನು ಗಳಿಸಲಾಗಿದೆ.