ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಕಳೆದ 84 ದಿನಗಳಲ್ಲಿ ವಾಣಿಜ್ಯ ಸಮುದಾಯಕ್ಕೆ ಅಂದಾಜು 10,000 ಕೋಟಿ ರೂ. ಆರ್ಥಿಕ ನಷ್ಟವಾಗಿದೆ.
ಕೇಂದ್ರ ಸರ್ಕಾರ ಅಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಸಂವಿಧಾನದ 370 ಮತ್ತು 35ಎ ವಿಧಿಯನ್ನು ಹಿಂದಕ್ಕೆ ಪಡೆದು ಹಲವು ಕಾನೂನಾತ್ಮಕ ನಿರ್ಬಂಧನೆಗಳನ್ನು ಹೇರಿತ್ತು.
ಆರ್ಟಿಕಲ್ 370 ರದ್ದಾದ 64 ದಿನಗಳಲ್ಲಿ ಕಣಿವೆ ರಾಜ್ಯದ ಮಾರುಕಟ್ಟೆಗಳು, ವಾಣಿಜ್ಯ ವಹಿವಾಟು, ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ತತ್ಪರಿಣಾಮ ಈವರೆಗೂ ಸುಮಾರು ₹ 10,000 ಕೋಟಿ ಆರ್ಥಿಕ ನಷ್ಟವಾಗಿದೆ ಎಂದು ಕಾಶ್ಮೀರಿ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ (ಕೆಸಿಸಿಐ) ಅಧ್ಯಕ್ಷ ಶೇಖ್ ಆಶಿಖ್ ಹೇಳಿದ್ದಾರೆ.
ಕೆಲವು ಪ್ರದೇಶದ ಅಂಗಡಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಕೆಲವೇ ಗಂಟೆಗಳ ಕಾಲ ವಹಿವಾಟು ನಡೆಸಲು ಅನುಮತಿ ನೀಡಲಾಗಿತ್ತು. ವಿಶೇಷ ಸ್ಥಾನಮಾನ ರದ್ದತಿಯಿಂದ ಈವರೆಗೂ ಕಾಶ್ಮೀರದಲ್ಲಿ ವಾಣಿಜ್ಯ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿಲ್ಲ. ವ್ಯಾಪಾರಿಗಳಿಗೆ ಭಾರೀ ನಷ್ಟವಾಗಿದ್ದು, ವಾಣಿಜ್ಯ ಸಮುದಾಯಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ. ಇದರಿಂದ ಚೇತರಿಸಿಕೊಳ್ಳಲು ಹಲವು ದಿನಗಳೇ ಬೇಕಾಗಬಹುದು ಎಂದು ತಿಳಿಸಿದ್ದಾರೆ.