ನ್ಯೂಯಾರ್ಕ್: ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಅಪರೂಪದ ಸಾಧನೆ ಮಾಡಿದ್ದು, ಸುಮಾರು 200 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, 27 ಆಗಸ್ಟ್ 2020 ರ ಹೊತ್ತಿಗೆ ಬೆಜೋಸ್ ಒಟ್ಟು 202 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಮೈಕ್ರೋಸಾಫ್ಟ್ನ ಬಿಲ್ ಗೇಟ್ಸ್ ಇದ್ದು, ಅವರ ನಿವ್ವಳ ಮೌಲ್ಯ 124 ಬಿಲಿಯನ್ ಡಾಲರ್ ಇದೆ.
ಬೆಜೋಸ್ ಒಂದು ಮೈಲಿಗಲ್ಲನ್ನು ದಾಟಿದ್ದಾರೆ. ಇದು ಸುಮಾರು ನಾಲ್ಕು ದಶಕಗಳಲ್ಲಿ ಯಾರೂ ಮಾಡಿರದ ಸಾಧನೆ ಎಂದು ಯುಎಸ್ ಬ್ಯುಸಿನೆಸ್ ಮ್ಯಾಗಝಿನ್ ಫೋರ್ಬ್ಸ್ ಹೇಳಿದೆ. ಯುಎಸ್ ಟ್ರೇಡ್ನಲ್ಲಿ ಅಮೆಜಾನ್ ಷೇರು ಬುಧವಾರ ಶೇ. 2 ಹೆಚ್ಚಿದೆ. ಇದರಿಂದ ಬೆಜೋಸ್‌ನ ಸಂಪತ್ತು 4.9 ಬಿಲಿಯನ್ ಹೆಚ್ಚಾಗಲಿದೆ.
ಇ-ಕಾಮರ್ಸ್ ದೈತ್ಯ ಅಮೆಜಾನ್ನಲ್ಲಿ ಬೆಜೋಸ್ ಶೇ. 11 ರಷ್ಟು ಪಾಲನ್ನು ಹೊಂದಿದ್ದಾರೆ. ಇದು ಅವರ ಸಂಪತ್ತಿನ ಶೇ.90 ಕ್ಕಿಂತ ಹೆಚ್ಚಿದೆ. ಇದಲ್ಲದೇ, ಬೆಜೋಸ್ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ, ಏರೋಸ್ಪೇಸ್ ಕಂಪನಿ ಬ್ಲೂ ಒರಿಜಿನ್ ಮತ್ತು ಇತರ ಕೆಲವು ಖಾಸಗಿ ಹೂಡಿಕೆಗಳನ್ನು ಹೊಂದಿದ್ದಾರೆ.
1 ಜನವರಿ 2020 ರಂದು ಬೆಜೋಸ್‌ನ ನಿವ್ವಳ ಮೌಲ್ಯ ಕೇವಲ 115 ಬಿಲಿಯನ್ ಡಾಲರ್ ಇತ್ತು. ಕೊರೊನಾ ವೈರಸ್ ಆವರಿಸಿಕೊಂಡ ಬಳಿಕ ಅಮೆಜಾನ್ನ ಸ್ಟಾಕ್ ಬೆಲೆಯು ಶೇ 80 ರಷ್ಟು ಏರಿದೆ. ಇದರಿಂದಾಗಿ ಬೆಜೋಸ್ ನಿವ್ವಳ ಮೌಲ್ಯದಲ್ಲಿ ಅಭೂತಪೂರ್ವ ಏರಿಕೆಯಾಗಿದೆ.
ಇನ್ನೊಬ್ಬ ಟೆಕ್ ದೊರೆ ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಕೂಡ ಈ ವಾರದ ಆರಂಭದಲ್ಲಿ ಹೊಸ ಮೈಲಿಗಲ್ಲು ದಾಟಿದ್ದಾರೆ. ಇತ್ತೀಚಿನ ಭಾರಿ ಲಾಭದಿಂದಾಗಿ ಜುಕರ್ ಬರ್ಗ್ ನಿವ್ವಳ ಮೌಲ್ಯ 100 ಬಿಲಿಯನ್ ಡಾಲರ್ ಮೀರಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಬುಧವಾರದ ಹೊತ್ತಿಗೆ ಜುಕರ್‌ಬರ್ಗ್‌ನ ನಿವ್ವಳ ಮೌಲ್ಯ 115 ಬಿಲಿಯನ್ ಡಾಲರ್ ಆಗಿದೆ.
ಕಳೆದ ತಿಂಗಳು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಖೇಶ್ ಅಂಬಾನಿ ಅಗ್ರ - ಐದು ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಈ ವರ್ಷ 22.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಗಳಿಸಿದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು. ಬುಧವಾರದ ಹೊತ್ತಿಗೆ ಒಟ್ಟು ನಿವ್ವಳ ಮೌಲ್ಯ 81.1 ಬಿಲಿಯನ್ ಡಾಲರ್ನೊಂದಿಗೆ ಅಂಬಾನಿ ಏಳನೇ ಸ್ಥಾನದಲ್ಲಿದ್ದಾರೆ.