ನವದೆಹಲಿ: ದೆಹಲಿ ಮತ್ತು ಬೆಂಗಳೂರಿನಲ್ಲಿ ಮೆಟ್ರೋ ರೈಲು ವಿಸ್ತರಣೆ ಯೋಜನೆಗಳಿಗೆ ಬೆಂಬಲ ಸೇರಿದಂತೆ ಇತರೆ ಯೋಜನೆಗಳಿಗೆ ಜಪಾನ್ ಭಾರತಕ್ಕೆ 225 ಬಿಲಿಯನ್ ಯೆನ್ (14,889 ಕೋಟಿ ರೂ.) ಸಾಲ ನೀಡಲಿದೆ.
ಸಾಲದ ಹಣ ಹೇಗೆ ಬಳಕೆ ಆಗಲಿದೆ?
ಬಹು ಉದ್ದೇಶಕ್ಕೆ ಜಪಾನ್ ನೀಡುವ ಸಾಲವನ್ನು ಭಾರತ, ಹಿಮಾಚಲ ಪ್ರದೇಶದ ಬೆಳೆ ವೈವಿಧ್ಯೀಕರಣ ಯೋಜನೆ, ರಾಜಸ್ಥಾನದಲ್ಲಿ ಗ್ರಾಮೀಣ ನೀರು ಸರಬರಾಜು ಯೋಜನೆ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ವಿದ್ಯುತ್ ಸರಬರಾಜು ಪರಿಸ್ಥಿತಿ ಸುಧಾರಿಸಲು 4 ಬಿಲಿಯನ್ ಯೆನ್ ಅನುದಾನವನ್ನು ಬಳಸಿಕೊಳ್ಳಲಿದೆ.
ಜಪಾನಿನ ರಾಯಭಾರಿ ಸುಜುಕಿ ಸಟೋಶಿ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಿ.ಎಸ್.ಮೊಹಾಪಾತ್ರ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಬೆಂಗಳೂರಿನ ಪಾಲು..
ದೆಹಲಿ ಮೆಟ್ರೊದ ಹಂತ IV ವಿಸ್ತರಣೆಯನ್ನು 12.5 ಕಿ.ಮೀ ಮುಕುಂದಪುರ-ಮೌಜ್ಪುರ್ ಮಾರ್ಗ, 28.9 ಕಿ.ಮೀ ಜನಕ್ಪುರಿ ಪಶ್ಚಿಮ-ಆರ್.ಕೆ. ಆಶ್ರಮ ಮಾರ್ಗ ಮತ್ತು ಹೊಸ 23.6 ಕಿ.ಮೀ ಏರೋಸಿಟಿ-ತುಘಲಕಾಬಾದ್ ಕಾರಿಡಾರ್ ನಡುವೆ ಕೈಗೊಳ್ಳಲಾಗುತ್ತದೆ. ಜಪಾನಿನ ನೆರವು ಬೆಂಗಳೂರು ಮೆಟ್ರೋ ಹಂತ- 2 ಅನ್ನು ಕೇಂದ್ರೀಯ ವ್ಯವಹಾರಗಳ ಜಿಲ್ಲಾ ಪ್ರದೇಶ, ವಸತಿ ಪ್ರದೇಶಗಳು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಸ್ತರಿಸಲಾಗುತ್ತದೆ.
ಇದನ್ನೂ ಓದಿ: 40 ಟನ್ ಸಾಮರ್ಥ್ಯದ ಅಶೋಕ್ ಲೇಲ್ಯಾಂಡ್ ಹೊಸ ಟ್ರಕ್ ಬಿಡುಗಡೆ
ರಾಜಸ್ಥಾನದ ಗ್ರಾಮೀಣ ನೀರು ಸರಬರಾಜು ಯೋಜನೆಗೆ ಧನಸಹಾಯ ನೀಡುವುದರಿಂದ ರಾಜ್ಯದ ಝುನ್ಝುನು ಮತ್ತು ಬಾರ್ಮರ್ ಜಿಲ್ಲೆಗಳಲ್ಲಿ ಸುಮಾರು 20,000 ಕಿ.ಮೀ ವಿಸ್ತಾರವಾದ ವಿತರಣಾ ಜಾಲ ಸೇರಿದಂತೆ ನೀರು ಸಂಸ್ಕರಣಾ ಘಟಕಗಳು ಮತ್ತು ಈ ಸಂಬಂಧಿತ ಸೌಲಭ್ಯಗಳ ನಿರ್ಮಾಣ ಮಾಡಲಾಗುತ್ತದೆ.
ಹಿಮಾಚಲ ಪ್ರದೇಶದಲ್ಲಿ ಬೆಳೆ ವೈವಿಧ್ಯೀಕರಣ ಯೋಜನೆಗಾಗಿ(ಹಂತ 2) ಸಾಲ ಪಡೆಯಲಾಗುತ್ತಿದೆ. ಕೃಷಿ ಉತ್ಪಾದಕತೆ ಮತ್ತು ಸುಸ್ಥಿರ ಬೆಳೆ ವೈವಿಧ್ಯೀಕರಣ ಮೌಲ್ಯದ ಬೆಳೆಗಳನ್ನು ಉತ್ತೇಜಿಸುವ ಮೂಲಕ ರೈತರ ಆದಾಯ ಸುಧಾರಿಸುವ ಗುರಿಯನ್ನು ಹೊಂದಿದೆ.
ದೆಹಲಿ ಮೆಟ್ರೋ ಯೋಜನೆಗಾಗಿ ಜಪಾನಿನ ಸಾಲ 120 ಬಿಲಿಯನ್ ಯೆನ್‌ಗೆ ಹತ್ತಿರವಿರಲಿದೆ. ಬೆಂಗಳೂರು ಮೆಟ್ರೋ ಯೋಜನೆಗೆ 50 ಬಿಲಿಯನ್ ಯೆನ್ ಮತ್ತು ರಾಜಸ್ಥಾನದಲ್ಲಿ ನೀರಿನ ಯೋಜನೆ ಬೆಂಬಲಿಸಲು 45 ಬಿಲಿಯನ್ ಯೆನ್ ಸಾಲ ನೀಡಲಾಗುವುದು.
ಜಪಾನ್‌ನ ಮೊದಲ ಸಾಗರೋತ್ತರ ಅಭಿವೃದ್ಧಿ ನೆರವಿನಡಿ ಅಂಡಮಾನ್ ಮತ್ತು ನಿಕೋಬಾರ್‌ಗೆ ಸೌರ ಪಿವಿಯಿಂದ ಉತ್ಪತ್ತಿಯಾಗುವ ನವೀಕರಿಸಬಹುದಾದ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವಿನಿಯೋಗಿಸುತ್ತಿದೆ. ಪೋರ್ಟ್ ಬ್ಲೇರ್ ಸೇರಿದಂತೆ ದಕ್ಷಿಣ ಅಂಡಮಾನ್‌ನಲ್ಲಿ ಸೌರ ಪಿವಿಯಿಂದ ಉತ್ಪತ್ತಿಯಾಗುವ ವಿದ್ಯುಚ್ಛಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು 15 ಮೆಗಾವ್ಯಾಟ್ ಬ್ಯಾಟರಿಗಳು ಮತ್ತು ಪವರ್ ಸಿಸ್ಟಮ್ ಸ್ಟೆಬಿಲೈಜರ್ ಸಂಗ್ರಹಿಸಲು ಅನುದಾನ ಬಳಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.