ಪಣಜಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಜೆಟ್ ಇಂಧನ ಮಾರಾಟ ಶೇ. 60ರಷ್ಟು ಚೇತರಿಸಿಕೊಂಡಿದ್ದು, ಈ ವರ್ಷದ ಮಾರ್ಚ್ ವೇಳೆಗೆ ದೇಶೀಯ ಮಾರಾಟವು ಪೂರ್ಣ ಪ್ರಮಾಣದ ಸಾಮರ್ಥ್ಯ ಮುಟ್ಟುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊರೊನಾ ವೈರಸ್ ಪ್ರೇರಿತ ಲಾಕ್ಡೌನ್ ಹೊಡತಕ್ಕೆ ಸಿಲುಕಿದ್ದ ಜೆಟ್ ಇಂಧನ, ವ್ಯವಹಾರದಲ್ಲಿ ಕುಸಿತ ದಾಖಲಿಸಿತ್ತು. 2020ರ ಮೇ 25ರಿಂದ ವಾಯುಯಾನ ಪುನರಾರಂಭವಾಗಿ ಮತ್ತೆ ಇಂಧನದ ಬೇಡಿಕೆ ಹೆಚ್ಚಾಯಿತು. ಅಲ್ಲಿಂದ ನಿಧಾನವಾಗಿ ಚೇತರಿಕೆಯತ್ತ ಮರಳುತ್ತಿದೆ. ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ತನ್ನ ಹಿಂದಿನ ಲಯಕ್ಕೆ ಮರಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಅದು ಶೇ. 60ರಷ್ಟು ಚೇತರಿಸಿಕೊಂಡಿದೆ. ಕೋವಿಡ್-19 ವಿರುದ್ಧ ಲಸಿಕೆ ಆಶಾವಾದದೊಂದಿಗೆ ಹೆಚ್ಚಿನ ಚೇತರಿಕೆ ಬರಲಿದೆ ಎಂದು ಇಂಡಿಯನ್ ಆಯಿಲ್ನ ಕಾರ್ಯನಿರ್ವಾಹಕ ನಿರ್ದೇಶಕ (ಏವಿಯೇಷನ್) ಸಂಜಯ್ ಸಹಯ್ ತಿಳಿಸಿದ್ದಾರೆ.
ಸೀರಂ ಇನ್ಸ್ಟಿಟ್ಯೂಟ್ ತಯಾರಿಸಿದ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್-19 ಲಸಿಕೆ ಕೋವಿಶೀಲ್ಡ್ ತುರ್ತು ಬಳಕೆಗೆ ಭಾರತದ ಔಷಧ ನಿಯಂತ್ರಕ ಭಾನುವಾರ ಅನುಮೋದಿಸಿದೆ. ದೇಶದಲ್ಲಿ ನಿರ್ಬಂಧಿತ ತುರ್ತು ಬಳಕೆಗಾಗಿ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದಕ್ಕೂ ಹಸಿರು ನಿಶಾನೆ ದೊರೆತಿದೆ.
ಮಾರ್ಚ್ ಅಂತ್ಯದ ವೇಳೆಗೆ ದೇಶೀಯ ವಲಯವು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದೆ ಎಂದು ನಾವು ಭಾವಿಸುತ್ತೇವೆ. ಅಂತಾರಾಷ್ಟ್ರೀಯ ವಲಯವು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದರು.
ಸಾಂಕ್ರಾಮಿಕ ಪೂರ್ವದಲ್ಲಿ ಐಒಸಿ ಐದು ಮಿಲಿಯನ್ ಮೆಟ್ರಿಕ್ ಟನ್ ಮಾರಾಟ ಹೊಂದಿತ್ತು. ನಾವು ಬಹಳ ವೇಗವಾಗಿ ಅದಕ್ಕೆ ಮರಳಲಿದ್ದೇವೆ. ದೇಶೀಯ ವಿಮಾನಯಾನ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಾಕಷ್ಟು ಹೊಸ ಮಾರ್ಗಗಳತ್ತ ಹಾರಾಡುತ್ತಿವೆ ಎಂದು ಸಹಯ್ ತಿಳಿಸಿದರು.