ನವದೆಹಲಿ: ಭಾರತ ಮತ್ತು ಅಮೆರಿಕ ಇಂದು ದೆಹಲಿಯ ಹೈದರಾಬಾದ್ ಭವನದಲ್ಲಿ ಐದು ಪ್ರಮುಖ ಕ್ಷೇತ್ರಗಳ ಕುರಿತು ಮಾತುಕತೆ ನಡೆಸಿವೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ ತಿಳಿಸಿದ್ದಾರೆ.
ಉಭಯ ರಾಷ್ಟ್ರಗಳು ಭದ್ರತೆ, ರಕ್ಷಣೆ, ಇಂಧನ, ತಂತ್ರಜ್ಞಾನ ಮತ್ತು ಪೀಪಲ್ ಟು ಪೀಪಲ್ ಸಂಪರ್ಕ ಕುರಿತು ಚರ್ಚಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಮಹತ್ವದ ಭರವಸೆ ನೀಡಿದ್ದಾರೆ. ರಕ್ಷಣಾ ಕ್ಷೇತ್ರದ ಸಹಯೋಗಕ್ಕೆ ಹೆಚ್ಚಿನ ಒಲವು ತೋರಿದ್ದಾರೆ ಎಂದು ಹೇಳಿದ್ದಾರೆ.
ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ತಾಯ್ನಾಡಿನ ಭದ್ರತೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರತ ಗುಂಪುಗಳನ್ನು ಸ್ಥಾಪಿಸಲು ಉಭಯ ದೇಶಗಳು ನಿರ್ಧರಿಸಿವೆ ಎಂದು ಶ್ರಿಂಗ್ಲಾ ಸುದ್ದಿಗಾರರಿಗೆ ತಿಳಿಸಿದರು.
ರಕ್ಷಣಾ ಕ್ಷೇತ್ರದಲ್ಲಿ ಖರೀದಿ, ತಂತ್ರಜ್ಞಾನ ಮತ್ತು ಜಂಟಿ ಸಹಯೋಗಕ್ಕಾಗಿ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಐದು ಗಂಟೆಗಳ ಕಾಲ ಮಾತುಕತೆ ನಡೆಸಿದರು ಎಂದು ಶ್ರಿಂಗ್ಲಾ ಅವರು ಮಾಹಿತಿ ನೀಡಿದರು.