ನವದೆಹಲಿ: ಕೈಗಾರಿಕಾ ಸಂಸ್ಥೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ನಡೆಸಿದ ಸಮೀಕ್ಷೆಯಲ್ಲಿ, 2008-09ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಇಂಡಿಯಾ ಇಂಕ್‌ನ (ಭಾರತದ ವ್ಯವಹಾರ) ವಿಶ್ವಾಸಾರ್ಹ ಮಟ್ಟ ತೀರ ಕೆಳಗೆ ಇಳಿದಿದೆ, ಕೊರೊನಾ ವೈರಸ್ ವ್ಯವಹಾರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿದೆ.
ಉದ್ಯಮ ಒಕ್ಕೂಟದ ವ್ಯವಹಾರ ವಿಶ್ವಾಸ ಸಮೀಕ್ಷೆಯ ಪ್ರಕಾರ, ಸರ್ಕಾರದ ಸಮಯೋಚಿತ ಕ್ರಮಗಳು ದೇಶೀಯ ಆರ್ಥಿಕತೆ ಶೀಘ್ರ ಸಹಜ ಸ್ಥಿತಿಗೆ ಮರಳುವಂತೆ ಅನುವು ಮಾಡಿಕೊಡುತ್ತವೆ. ಆರ್‌ಬಿಐ ರೆಪೊ ದರದಲ್ಲಿ ಇನ್ನೂ 100 ಬೇಸಿಸ್ ಪಾಯಿಂಟ್ ಕಡಿತಗೊಳಿಸುವಂತೆ ಒತ್ತಾಯಿಸಿದೆ.
ಕೊರೊನಾ ವೈರಸ್ನಿಂದ ಜಾಗತಿಕ ಆರ್ಥಿಕತೆಯ ಭವಿಷ್ಯವೇ ಹದಗೆಟ್ಟಿದೆ. ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಭಾರತ ಸೇರಿದಂತೆ ಅನೇಕ ದೇಶಗಳು ಕಟ್ಟುನಿಟ್ಟಾದ ಸಾಮಾಜಿಕ ಅಂತರ ಕಾಪಾಡಲು ಲಾಕ್‌ಡೌನ್ ಜಾರಿಗೊಳಿಸಿವೆ.
ಒಟ್ಟಾರೆ ವ್ಯವಹಾರ ವಿಶ್ವಾಸ ಸೂಚ್ಯಂಕವು ಪ್ರಸಕ್ತ ವರ್ಷದಲ್ಲಿ ಶೇ 42.9ರಷ್ಟಿದೆ. ಕಳೆದ ಸಮೀಕ್ಷಾ ವರದಿಯಲ್ಲಿ ಶೇ 59.0ರಷ್ಟು ಇತ್ತು ಎಂದಿದೆ.
ಕಾರ್ಮಿಕ ಮಾರುಕಟ್ಟೆ ಸುಧಾರಣೆ ಕ್ರಮಗಳನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳಬೇಕು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಾರ್ಪೊರೇಟ್ ಬಾಂಡ್‌ಗಳ ನೇರ ಖರೀದಿ ಕೈಗೊಳ್ಳಬೇಕು. ಅಲ್ಪಾವಧಿಯ ಸಾಲ ದರವನ್ನು (ರೆಪೊ) ಇನ್ನೂ 100 ಬೇಸಿಸ್ ಪಾಯಿಂಟ್ ಕಡಿಮೆಗೊಳಿಸಬೇಕು ಎಂದು ಫಿಕ್ಕಿ ಸೂಚಿಸಿದೆ.
ಭಾರತದ ಆರ್ಥಿಕತೆಯು ಬೇಡಿಕೆ, ಪೂರೈಕೆ ಮತ್ತು ಹಣಕಾಸು ಮಾರ್ಗಗಳ ಮೂಲಕ ಆಘಾತವನ್ನು ಎದುರಿಸುತ್ತಿದೆ ಎಂದು ಫಿಕ್ಕಿ ಎಚ್ಚರಿಸಿದೆ.