ನವದೆಹಲಿ: ಕಳೆದ ವರ್ಷದ ಮಾರ್ಚ್ ತಿಂಗಳಿಗೆ ಹೋಲಿಸಿದರೆ ಭಾರತದಲ್ಲಿ ಒಟ್ಟಾರೆ ನೇಮಕ ಚಟುವಟಿಕೆ ಶೇ 18ರಷ್ಟು ಕುಸಿದಿದ್ದು, ಪ್ರಯಾಣ ಮತ್ತು ವಿಮಾನಯಾನ ಸಂಸ್ಥೆಗಳು, ಆತಿಥ್ಯ ಮತ್ತು ಚಿಲ್ಲರೆ ಉದ್ಯಮಗಳ ಉದ್ಯೋಗ ನೀಡುವಲ್ಲಿ ಶೇ 56ರಷ್ಟು ಕ್ಷೀಣಿಸಿದೆ ಎಂದು ಉದ್ಯೋಗ ಪೋರ್ಟಲ್ ನೌಕ್ರಿ ಡಾಟ್ ಕಾಮ್ ತಿಳಿಸಿದೆ.
ಚಿಲ್ಲರೆ ವಲಯದ ನೇಮಕಾತಿಯಲ್ಲಿ 50 ಪ್ರತಿಶತದಷ್ಟು ಕುಸಿತ ಕಂಡು ಅಗ್ರ ಸ್ಥಾನದಲ್ಲಿದ್ದರೇ ನಂತರದಲ್ಲಿ ಆಟೋ / ಪೂರಕ ( ಶೇ 38), ಫಾರ್ಮಾ (ಶೇ 26), ವಿಮೆ (ಶೇ 11), ಲೆಕ್ಕಪತ್ರ ನಿರ್ವಹಣೆ / ಹಣಕಾಸು (ಶೇ 10), ಐಟಿ - ಸಾಫ್ಟ್‌ವೇರ್ (ಶೇ 9) ಮತ್ತು ಬಿಎಫ್‌ಎಸ್‌ಐ (ಶೇ 9) ಎಂದು 'ನೌಕ್ರಿ ಜಾಬ್‌ಸ್ಪೀಕ್ ಸೂಚ್ಯಂಕ' 2020ರ ಮಾರ್ಚ್ ಅಂಕಿ - ಅಂಶಗಳನ್ನು ವಿಶ್ಲೇಷಿಸಿದೆ ಹೇಳಿದೆ.
2020ರ ಮಾರ್ಚ್ ಮೊದಲ 20 ದಿನಗಳ ನೇಮಕಾತಿ ಚಟುವಟಿಕೆಯು ಕೇವಲ ಶೇ 5ರಷ್ಟು ಇಳಿಕೆ ಕಂಡಿತ್ತು. ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನುಷ್ಠಾನದಿಂದ ಕಳೆದ 10 ದಿನಗಳಲ್ಲಿ ನೇಮಕಾತಿ ಚಟುವಟಿಕೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಇದರಿಂದಾಗಿ ನೇಮಕಾತಿಯಲ್ಲಿ ಒಟ್ಟಾರೆ ಶೇ 18ರಷ್ಟು ಕ್ಷೀಣಿಸಿದೆ ಎಂದು ನೌಕ್ರಿ ಡಾಟ್ ಕಾಮ್ ನ ಮುಖ್ಯ ಬಿಸಿನೆಸ್ ಆಫೀಸರ್ ಪವನ್ ಗೋಯಲ್ ಹೇಳಿದ್ದಾರೆ.
ನೇಮಕಾತಿ ಚಟುವಟಿಕೆಗಳು ಜನವರಿಯಿಂದ ಆರಂಭವಾಗಿದ್ದು, ಅದು ನಿಧಾನಗತಿಯ ಆರಂಭಿಕ ಚಿಹ್ನೆಗಳನ್ನು ಪ್ರದರ್ಶಿಸಿದೆ. ನೇಮಕಾತಿ ಸೂಚ್ಯಂಕವು ಕೇವಲ ಶೇ 5.75ರಷ್ಟು ಏರಿಕೆಯಾಗಿದೆ. ಫೆಬ್ರವರಿಯಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ. ನಗರಗಳಾದ್ಯಂತ ಉದ್ಯೋಗ ನೇಮಕಾತಿ ಚಟುವಟಿಕೆಯಲ್ಲಿ ಕುಸಿತ ದಾಖಲಾಗಿದೆ.
ಈ ಕುಸಿತವು ಮಹಾನಗರಗಳ ವಾರು ದೆಹಲಿಯಲ್ಲಿ ಶೇ 26ರಷ್ಟು ಕುಸಿದಿದ್ದರೆ, ಚೆನ್ನೈ ಮತ್ತು ಹೈದರಾಬಾದ್ ಕ್ರಮವಾಗಿ ಶೇ 24 ಮತ್ತು ಶೇ 18ರಷ್ಟು ತಗ್ಗಿದೆ. ದೆಹಲಿ / ಎನ್‌ಸಿಆರ್‌ನಲ್ಲಿ, ಫಾರ್ಮಾ ಉದ್ಯಮವು ಕ್ರಮವಾಗಿ ಶೇ 66 ಮತ್ತು ಶೇ 43ರಷ್ಟು ಇಳಿಕೆಯಾಗಿದೆ. ಆತಿಥ್ಯ (ಶೇ 63), ಬ್ಯಾಂಕಿಂಗ್ (ಶೇ 28), ಅಕೌಂಟಿಂಗ್ (ಶೇ 23) ಮತ್ತು ಐಟಿ - ಹಾರ್ಡ್‌ವೇರ್ (ಶೇ 22 ) ಕ್ಷೇತ್ರಗಳು ರಾಷ್ಟ್ರ ರಾಜಧಾನಿಯಲ್ಲಿ ಕುಸಿದಿದೆ.