ನವದೆಹಲಿ: ಡೇಟಾ ಮತ್ತು ನಾವೀನ್ಯತೆ ಸಾಮರ್ಥ್ಯಗಳ ಜತೆ ಭಾರತವು ವಿಶ್ವದ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್: ಎಐ) ಪ್ರಯೋಗಾಲಯ ಆಗಬಹುದು ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.
'ಎಐ - ರೈಸ್ 2020' ಕುರಿತು ಜಾಗತಿಕ ವರ್ಚ್ಯುವಲ್ ಶೃಂಗಸಭೆ ಆಯೋಜನೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂತ್, ಜೀವನವನ್ನು ಪರಿವರ್ತಿಸಲು ಕೃತಕ ಬುದ್ಧಿಮತ್ತೆ ಸಹಾಯ ಮಾಡುತ್ತದೆ ಎಂದರು.
ಆರೋಗ್ಯ, ಶಿಕ್ಷಣ, ಹಣಕಾಸು, ಕೃಷಿ ಮತ್ತು ಆಡಳಿತದಂತಹ ಕ್ಷೇತ್ರಗಳಲ್ಲಿ ಸಾಮಾಜಿಕ ಸಬಲೀಕರಣಕ್ಕಾಗಿ ಭಾರತ ಎಐ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅದರ ದತ್ತಾಂಶ ಮತ್ತು ನಾವೀನ್ಯತೆಯ ಸಾಮರ್ಥ್ಯದ ಮೇಲೆ, ಭಾರತವು ವಿಶ್ವದ ಎಐ ಪ್ರಯೋಗಾಲಯ ಆಗಬಹುದು. ಇದು ವ್ಯಾಪಕವಾದ ಸಾಮಾಜಿಕ ಸಮಸ್ಯೆಗಳಿಗೆ ಅರ್ಥಗರ್ಭಿತ ಪರಿಹಾರ ನೀಡಲಿದೆ ಎಂದು ಹೇಳಿದರು.
ವರ್ಚ್ಯುವಲ್ ಶೃಂಗಸಭೆಯ ರೈಸ್ 2020 (ಸಾಮಾಜಿಕ ಸಬಲೀಕರಣ 2020ರ ಜವಾಬ್ದಾರಿ ಎಐ) ಅಕ್ಟೋಬರ್ 5ರಿಂದ 9ರ ತನಕ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಮತ್ತು ನೀತಿ ಆಯೋಗ ಆಯೋಜಿಸಲಿದೆ.
ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಎಲ್ಲರಿಗೂ ಅನುಕೂಲ ಆಗುವಂತಹ ದೃಢವಾದ ಎಐ-ಚಾಲಿತ ಸಾರ್ವಜನಿಕ ಮೂಲಸೌಕರ್ಯಗಳ ರಚನೆಯ ಕುರಿತು ಚರ್ಚೆ ಪ್ರಾರಂಭಿಸುವುದು ಶೃಂಗಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೃತಕ ಬುದ್ಧಿಮತ್ತೆಯ ಜಾಗತಿಕ ಸಹಭಾಗಿತ್ವದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಭಾರತವು ಎಐ ಆಧಾರಿತ ಪರಿಹಾರಗಳನ್ನು ದೇಶೀಯವಾಗಿ ಮಾತ್ರವಲ್ಲ, ಪ್ರಪಂಚದಾದ್ಯಂತದ ಕಾರ್ಯಗತಗೊಳಿಸುವ ಗುರಿ ಹೊಂದಿದೆ. ಇದರಿಂದಾಗಿ ವ್ಯಾಪಕ ಸಾಮಾಜಿಕ ಸಬಲೀಕರಣ ಮತ್ತು ಸಮೃದ್ಧಿಗೆ ಕಾರಣವಾಗುತ್ತವೆ ಎಂದಿದೆ.
ಐದು ದಿನಗಳ ಶೃಂಗಸಭೆಯಲ್ಲಿ ಸಾಮಾಜಿಕ ಲಾಭಕ್ಕಾಗಿ ಎಐ ಅನ್ನು ಬಳಸುವ ತಂತ್ರ, ವಿಶ್ವಾಸಾರ್ಹ ಎಐ ಮೂಲಸೌಕರ್ಯಗಳ ರಚಿಸುವ ಪ್ರಾಮುಖ್ಯತೆ ಮತ್ತು ಸಬಲೀಕರಣದಲ್ಲಿ ಎಐನ ಪರಿವರ್ತಕ ಪರಿಣಾಮದಂತಹ ಪ್ರಾಮುಖ್ಯತೆಯ ಬಗ್ಗೆ ವಿಶ್ವದಾದ್ಯಂತದ ಎಐ ತಜ್ಞರು ಚರ್ಚಿಸಲಿದ್ದಾರೆ.