ರಾಂಚಿ (ಉತ್ತರಾಖಂಡ್): ಅಲೋಪತಿ ವೈದ್ಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ಅವರಿಗೆ ಉತ್ತರಾಖಂಡ್ನ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸವಾಲೊಂದನ್ನು ಎಸೆದಿದೆ.
ಯಾವ್ಯಾವ ಅಲೋಪತಿ ಆಸ್ಪತ್ರೆಗಳು ಚಿಕಿತ್ಸೆಗಾಗಿ ಪತಂಜಲಿ ಔಷಧಿಗಳನ್ನು ನೀಡಿವೆ? ಎಂದು ಯೋಗ ಗುರು ರಾಮದೇವ್ಗೆ ಪ್ರಶ್ನಿಸಿರುವ ಉತ್ತರಾಖಂಡ್ನ ಐಎಂಎ, ಈ ಬಗ್ಗೆ ಚರ್ಚೆಗೆ ಇಳಿಯಲು ಸೂಚಿಸಿದೆ.
ಅಲೋಪತಿ ಔಷಧಗಳನ್ನು ತೆಗೆದುಕೊಂಡ ಲಕ್ಷಾಂತರ ಮಂದಿ ಈವರೆಗೆ ಮೃತಪಟ್ಟಿದ್ದಾರೆ. ಡಿಸಿಜಿಐ ಅನುಮೋದನೆ ನೀಡಿರುವ ಫ್ಯಾವಿಫ್ಲೂ ಹಾಗೂ ಇನ್ನಿತರ ಔಷಧಗಳು ಕೂಡ ಕೋವಿಡ್-19 ಚಿಕಿತ್ಸೆಯಲ್ಲಿ ವಿಫಲಗೊಂಡಿವೆ. ಅಲೋಪತಿ ಆಸ್ಪತ್ರೆಗಳೇ ಪತಂಜಲಿ ಆಯುರ್ವೇದ ಔಷಧಗಳನ್ನ ಬಳಸುತ್ತಿದೆ ಎಂದು ರಾಮದೇವ್ ಈ ಹಿಂದೆ ಹೇಳಿಕೆ ನೀಡಿದ್ದರು. ಅವರ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಐಎಂಎ, ರಾಮದೇವ್ ಬಂಧನಕ್ಕೆ ಒತ್ತಾಯಿಸಿತ್ತು.
ಇದನ್ನೂ ಓದಿ: ಅಲೋಪತಿ ವೈದ್ಯಕೀಯ ಟೀಕೆ : ಬಾಬಾ ರಾಮ್ದೇವ್ಗೆ 1,000 ಕೋಟಿ ರೂ. ಮಾನನಷ್ಟ ನೋಟಿಸ್!
ಅಲೋಪಥಿ ಔಷಧಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸುವ ಈ ಹೇಳಿಕೆಯನ್ನು ಹಿಂಪಡೆಯುವಂತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸಹ ಬಾಬಾಗೆ ಪತ್ರ ಬರೆದು ಸೂಚಿಸಿದ್ದರು. ಬಂಧನಕ್ಕೆ ಐಎಂಎ ಆಗ್ರಹಿಸಿದ ಬೆನ್ನಲ್ಲೇ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಅಲೋಪಥಿ ಶಾಶ್ವತ ಪರಿಹಾರವನ್ನು ನೀಡುತ್ತದೆಯೇ ಎಂಬ ಪ್ರಶ್ನೆ ಸೇರಿದಂತೆ ಐಎಂಎ ಹಾಗೂ ಫಾರ್ಮಾ ಕಂಪನಿಗಳಿಗೆ ಬಾಬಾ 25 ಪ್ರಶ್ನೆಗಳನ್ನು ಕೇಳಿದ್ದರು.
ಮತ್ತೆ ಹೀಗೆ ಪ್ರಶ್ನಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಐಎಂಎ, ತಮ್ಮ ಹೇಳಿಕೆ ಕುರಿತಂತೆ ಬಾಬಾ ರಾಮ್ದೇವ್ 15 ದಿನದೊಳಗೆ ವಿಡಿಯೋ ಮೂಲಕ ಅಥವಾ ಲಿಖಿತವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ 1,000 ಕೋಟಿ ರೂ. ಮಾನನಷ್ಟ ಪಾವತಿಸಬೇಕು ಎಂದು ಖಡಕ್ ಎಚ್ಚರಿಕೆ ಕೂಡ ನೀಡಿತ್ತು.