ನವದೆಹಲಿ: ಜಿಎಸ್‌ಟಿ ಮಂಡಳಿ ಸಭೆಯು ಮಾರ್ಚ್ 14ರಂದು ನಡೆಯಲಿದ್ದು, ಮೊಬೈಲ್ ಫೋನ್, ಪಾದರಕ್ಷೆ ಮತ್ತು ಜವಳಿ ಸೇರಿದಂತೆ ಐದು ಕ್ಷೇತ್ರಗಳ ಮೇಲಿನ ಸ್ಲ್ಯಾಬ್ ದರಗಳ ತರ್ಕಬದ್ಧ ಹೊಸ ರಿಟರ್ನ್ ಫೈಲಿಂಗ್ ವ್ಯವಸ್ಥೆ ಮತ್ತು ಇ-ಇನ್ವಾಯ್ಸಿಂಗ್ ಅನುಷ್ಠಾನದ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ. ಜಿಎಸ್‌ಟಿ ನೆಟ್ವರ್ಕ್ ಪೋರ್ಟಲ್ ಕಾರ್ಯಾಚರಣೆಯ ತೊಂದರೆಗಳ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪ ಆಗಲಿವೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನದಿಂದಾಗಿ ಆದಾಯ ನಷ್ಟ ಪರಿಹಾರವಾಗಿ ರಾಜ್ಯಗಳಿಗೆ ನೀಡಬೇಕಾದ ಪರಿಹಾರ ನಿಧಿಯಲ್ಲಿ ಹಣವಿಲ್ಲ ಎಂದು ಕೇಂದ್ರವು ರಾಜ್ಯಗಳಿಗೆ ಸ್ಪಷ್ಟಪಡಿಸಿದೆ. ಹೀಗಾಗಿ, ಆದಾಯ ಸಂಗ್ರಹಣೆ ಹೆಚ್ಚಿಸುವ ಮಾರ್ಗಗಳ ಬಗ್ಗೆಯೂ ಚರ್ಚಿಸಲಾಗುವುದು.
ಸರಕುಗಳ ಚಲನೆ ಪತ್ತೆ ಹಚ್ಚಲು ಮತ್ತು ಜಿಎಸ್‌ಟಿ ವಂಚನೆ ಪರಿಶೀಲಿಸಲು ಏಪ್ರಿಲ್ನಿಂದ ಎನ್ಎಚ್ಎಐನ ಫಾಸ್ಟ್ಟ್ಯಾಗ್ ಕಾರ್ಯವಿಧಾನದ ಜತೆಗೆ ಜಿಎಸ್‌ಟಿ ಇ-ವೇ ಬಿಲ್ ವ್ಯವಸ್ಥೆಯ ಏಕೀಕರಣ ಹಾಗೂ ಆಧಾರ್ ದೃಢೀಕೃತ ಜಿಎಸ್‌ಟಿ ನೋಂದಣಿ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.
ಏಪ್ರಿಲ್ 1ರಿಂದ ಆರಂಭಿಸಲು ಉದ್ದೇಶಿಸಿರುವ ಜಿಎಸ್‌ಟಿ ಅಡಿಯಲ್ಲಿ ಲಾಟರಿ ಯೋಜನೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಂಕ ಏರುಪೇರು ಕಾಣುವ ಕ್ಷೇತ್ರಗಳಲ್ಲಿ ಜಿಎಸ್‌ಟಿ ದರದ ತರ್ಕಬದ್ಧಗೊಳಿಸುವಿಕೆಯನ್ನು ಕೌನ್ಸಿಲ್ ಚರ್ಚಿಸಲಿದೆ. ಇದು ಹೆಚ್ಚಿನ ಇನ್ಪುಟ್ ಕ್ರೆಡಿಟ್ ಮರುಪಾವತಿಗೆ ಕಾರಣವಾಗಲಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಸೆಲ್ಯುಲಾರ್ ಮೊಬೈಲ್ ಫೋನ್‌ಗಳಿಗೆ ಶೇ 12ರಷ್ಟು ಸುಂಕ ಹೇರಲಾಗಿದೆ. ಕೆಲವು ಇನ್ಪುಟ್ಗಳ ಮೇಲಿನ ಜಿಎಸ್‌ಟಿ ಶೇ 18ರಷ್ಟಿದೆ. ಪಾದರಕ್ಷೆಗಳಿಗೆ ಸಂಬಂಧಿಸಿದಂತೆ ಕೌನ್ಸಿಲ್ ಕಳೆದ ವರ್ಷ ಜೂನ್‌ನಲ್ಲಿ ಜಿಎಸ್‌ಟಿ ದರವನ್ನು ಶೇ 5ಕ್ಕೆ ಇಳಿಸಿತ್ತು. 1,000 ರೂ. ಮೌಲ್ಯಕ್ಕಿಂತ ಮೇಲ್ಪಟ್ಟ ಸಿದ್ಧ ವಸ್ತುಗಳ ಮೇಲೆ ಶೇ 18ರಷ್ಟು ಸುಂಕವಿದೆ. ಈ ವಲಯಕ್ಕೆ ಸಂಬಂಧಿಸಿದ ಪೂರಕ ಸರಕುಗಳ ಜಿಎಸ್‌ಟಿ ದರ ಶೇ 5-18ರ ವ್ಯಾಪ್ತಿಯಲ್ಲಿದೆ.
ಜವಳಿ ವಲಯವು ಪ್ರಸ್ತುತ ಜಿಎಸ್‌ಟಿ ದರ ಶೇ 5, 12 ಮತ್ತು 18ರಷ್ಟಿದೆ. ರಫ್ತುದಾರರಿಂದ ಮರುಪಾವತಿ ಮತ್ತು ಸುಂಕ ಪಡೆಯುವಲ್ಲಿ ಸಾಕಷ್ಟು ತೊಂದರೆ ಉಂಟುಮಾಡುತ್ತದೆ. ರಾಸಾಯನಿಕ ಗೊಬ್ಬರಗಳ ಮೇಲಿನ ಜಿಎಸ್‌ಟಿ ದರವು ಪ್ರಸ್ತುತ ಶೇ 5 ರಷ್ಟಿದೆ. ಆದರೆ, ಇನ್ಪುಟ್ಗಳ ಮೇಲೆ ಶೇ 12ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಆದಾಯವನ್ನು ಹೆಚ್ಚಿಸುವ ಮಾರ್ಗಗಳನ್ನು ಸೂಚಿಸಲು ರಚಿಸಿದ ಅಧಿಕಾರಿಗಳ ಸಮಿತಿ, ಕೆಳಮುಖದ ಸುಂಕ ರಚನೆಗಳ ವೈಪರೀತ್ಯಗಳನ್ನು ತೆಗೆದುಹಾಕಲು ಹಲವು ಕ್ರಮಗಳನ್ನು ಸೂಚಿಸಿದೆ. ಇದರಿಂದ ವಾರ್ಷಿಕ 20,000 ಕೋಟಿ ರೂ. ಆದಾಯ ನಷ್ಟ ಆಗುತ್ತಿದೆ ಎಂದು ಎಚ್ಚರಿಸಿದೆ.
ರಸಗೊಬ್ಬರಗಳು, ಮೊಬೈಲ್ ಫೋನ್, ಪಾದರಕ್ಷೆ, ನವೀಕರಿಸಬಹುದಾದ ಇಂಧನದ ಉಪಕರಣಗಳು ಮತ್ತು ಮಾನವ ನಿರ್ಮಿತ ನೂಲು ಜಿಎಸ್‌ಟಿಯನ್ನು ಶೇ 5-12ರಷ್ಟು ಆಕರ್ಷಿಸುತ್ತವೆ. ಇದರಿಂದಾಗಿ ಕೆಳಮುಖದ (Inverted Duty structure) ಸುಂಕ ರಚನೆಗೆ ಕಾರಣವಾಗುತ್ತಿವೆ. ಪೂರಕ ವಸ್ತುಗಳ ಮೇಲಿನ ಸುಂಕಕ್ಕೆ ಹೋಲಿಸಿದರೆ ಸಿದ್ಧಪಡಿಸಿದ ಸರಕುಗಳ ಮೇಲಿನ ಜಿಎಸ್‌ಟಿ ಕಡಿಮೆ ಇದೆ. ಹೀಗಾಗಿ ಗೊಂದಲದ ಗೂಡಾಗಿರುವ ಇವುಗಳ ಜಿಎಸ್‌ಟಿ ಸ್ಲ್ಯಾಬ್ ಅನ್ನು ನ್ಯಾಯಯುತಗೊಳಿಸಲು ಜಿಎಸ್‌ಟಿ ಮಂಡಳಿ ಮುಂದಾಗಲಿದೆ.