ನವದೆಹಲಿ: ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕೋವಿಡ್ ಲಸಿಕೆಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿಮೆಯಾಗುವುದೇ? ಅಥವಾ ಮುಕ್ತಗೊಳಿಸಲಾಗುತ್ತದೇ?
ಈ ಪ್ರಶ್ನೆಗಳಿಗೆ ಶುಕ್ರವಾರ ನಡೆಯಲಿರುವ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಉತ್ತರ ಸಿಗಲಿದೆ. ಲಸಿಕೆಗಳ ಮೇಲಿನ ತೆರಿಗೆಯ ವಿಷಯವು ಮುಖ್ಯ ಕಾರ್ಯಸೂಚಿಯಾಗಿದೆ. ಇದಲ್ಲದೇ, ಸಂಸ್ಕರಿಸಿದ ಆಹಾರ, ವೈದ್ಯಕೀಯ ದರ್ಜೆಯ ಆಮ್ಲಜನಕ ಮತ್ತು ವೈದ್ಯಕೀಯ ದರ್ಜೆಯ ಉಪಕರಣಗಳ ಮೇಲಿನ ಜಿಎಸ್‌ಟಿ ಕಡಿತದ ಬಗ್ಗೆಯೂ ಚರ್ಚಿಸಲಾಗುವುದು.
ಪಶ್ಚಿಮ ಬಂಗಾಳ, ಪಂಜಾಬ್, ಒಡಿಶಾ ಮತ್ತು ಇತರ ರಾಜ್ಯಗಳು ಇತ್ತೀಚೆಗೆ ಕೇಂದ್ರಕ್ಕೆ, ಲಸಿಕೆಗಳ ಮೇಲಿನ ಜಿಎಸ್‌ಟಿ ತೆಗೆದುಹಾಕುವಂತೆ ಕೇಳಿಕೊಂಡಿವೆ. ಆದರೆ, ಜಿಎಸ್‌ಟಿ ಮನ್ನಾ ಮಾಡಿದರೆ ಲಸಿಕೆ ದರ ಏರಿಕೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಹೇಳಿದ್ದರು.
ಜಿಎಸ್ಟಿಯಿಂದ ಸಂಪೂರ್ಣ ವಿನಾಯಿತಿ ಇದ್ದರೆ, ದೇಶೀಯ ತಯಾರಕರು ಕಚ್ಚಾ ವಸ್ತುಗಳು ಮತ್ತು ಸೇವೆಗಳಿಗೆ ಪಾವತಿಸಿದ ತೆರಿಗೆ ಮರು ಪಡೆಯಲು ಸಾಧ್ಯವಾಗುವುದಿಲ್ಲ. ಅಂತಿಮವಾಗಿ ಅವುಗಳ ಬೆಲೆಗಳನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಗ್ರಾಹಕರಿಗೆ ಹೊರೆಯಾಗುತ್ತದೆ ಎಂದಿದ್ದರು.
ಸಂಪೂರ್ಣ ವಿನಾಯಿತಿ ಇಲ್ಲದೇ ಲಸಿಕೆಗಳು ಶೂನ್ಯ ಸ್ಲ್ಯಾಬ್ಗೆ ಇರಬಾರದು ಎಂದು ಅರ್ಥಶಾಸ್ತ್ರಜ್ಞರು ಸೂಚಿಸುತ್ತಾರೆ. ಕನಿಷ್ಠ ಶೇ 0.1ರಷ್ಟು ತೆರಿಗೆ ವಿಧಿಸಿದರೆ, ತಯಾರಕರು ಇನ್ಪುಟ್ ತೆರಿಗೆಯನ್ನು ಮರು ಪಾವತಿಸಲು ಸಾಧ್ಯವಾಗುತ್ತದೆ ಎಂಬುದು ಅವರ ವಾದ.
ಹಣಕಾಸು ಸಚಿವಾಲಯ ಈ ಎರಡು ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆ. ಶುಕ್ರವಾರದ ಸಭೆಯಲ್ಲಿ ಇವುಗಳನ್ನು ದೀರ್ಘವಾಗಿ ಚರ್ಚಿಸಲಾಗುವುದು. ಪ್ರಸ್ತುತ, ಲಸಿಕೆಗಳಿಗೆ ಶೇ 5, ಕೋವಿಡ್ ಔಷಧಗಳು ಮತ್ತು ಆಮ್ಲಜನಕ ಸಾಂದ್ರಕಗಳಿಗೆ ಜಿಎಸ್‌ಟಿ ವಿಧಿಸಲಾಗುತ್ತದೆ.