ನವದೆಹಲಿ: ದೇಶದಲ್ಲಿ ಜುಲೈ ಮಾಸಿಕ ಅವಧಿಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಇಳಿಕೆ ಕಂಡುಬಂದಿದ್ದು, ಕಳೆದ ವರ್ಷದ 90,917 ಕೋಟಿ ರೂಗೆ. ವಿರುದ್ಧವಾಗಿ 87,422 ಕೋಟಿ ರೂ. ಮಾತ್ರ ಖಜಾನೆಗೆ ಹರಿದು ಬಂದಿದೆ.
ಮೇ ತಿಂಗಳಲ್ಲಿ 62,009 ಕೋಟಿ ರೂ. ಹಾಗೂ ಏಪ್ರಿಲ್ನಲ್ಲಿನ 32,294 ಕೋಟಿ ರೂ. ಸಂಗ್ರಹಕ್ಕೆ ಹೋಲಿಸಿದರೆ ಕೇಂದ್ರ ಖಜಾನೆಗೆ ಹರಿದು ಬಂದ ತೆರಿಗೆ ಪಾಲು ಜುಲೈನಲ್ಲಿ ಏರಿಕೆಯಾಗಿದೆ.
ವರ್ಷದಿಂದ ವರ್ಷಕ್ಕೆ ಹೋಲಿಸಿದರೆ 2020ರ ಜುಲೈ ಮಾಸಿಕದ ಸಂಗ್ರಹವು ಕಳೆದ ವರ್ಷದ ಇದೇ ತಿಂಗಳಲ್ಲಿ ಗಳಿಸಿದ ಆದಾಯದ ಶೇ 86ರಷ್ಟಿದೆ. ಜುಲೈ 2019ರಲ್ಲಿ ಜಿಎಸ್‌ಟಿ ಆದಾಯ 1.02 ಲಕ್ಷ ಕೋಟಿ ರೂ.ಯಷ್ಟಿತ್ತು.
2020ರ ಜುಲೈನಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ ಆದಾಯ 87,422 ಕೋಟಿ ರೂ.ಯಷ್ಟಿದೆ. ಇದರಲ್ಲಿ ಸಿಜಿಎಸ್‌ಟಿ 16,147 ಕೋಟಿ ರೂ., ಎಸ್‌ಜಿಎಸ್‌ಟಿ 21,418 ಕೋಟಿ ರೂ., ಐಜಿಎಸ್‌ಟಿ 42,592 ಕೋಟಿ ರೂ. (ಸರಕುಗಳ ಆಮದು 20,324 ಕೋಟಿ ರೂ.) ಮತ್ತು ಸೆಸ್ 7,265 ಕೋಟಿ ರೂ.ಯಷ್ಟಿದೆ.
ಎಲ್ಲಾ ಪ್ರಮುಖ ರಾಜ್ಯಗಳ ಜಿಎಸ್‌ಟಿ ಆದಾಯವು 2019ರ ಜುಲೈ ಮಾಸಿಕಕ್ಕೆ ಹೋಲಿಸಿದರೆ ಶೇ 15-20ರಷ್ಟು ಕಡಿಮೆಯಾಗಿದೆ.
ಜೂನ್ ಮಾಸಿಕದ ಸಂಗ್ರಹಣೆ ಜುಲೈಗಿಂತ ಹೆಚ್ಚಾಗಿದೆ. ಈ ಹಿಂದಿನ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯ ತೆರಿಗೆದಾರರು ಕೋವಿಡ್ ಕಾರಣದಿಂದ 2020ರ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿಗೆ ಸಂಬಂಧಿಸಿದ ತೆರಿಗೆಗಳನ್ನು ಸಹ ಪಾವತಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
5 ಕೋಟಿ ರೂ.ಗಿಂತ ಕಡಿಮೆ ವಹಿವಾಟು ಹೊಂದಿದ ತೆರಿಗೆದಾರರು 2020ರ ಸೆಪ್ಟೆಂಬರ್ ರವರೆಗೆ ರಿಟರ್ನ್ಸ್ ಸಲ್ಲಿಸಲು ವಿನಾಯಿತಿ ಪಡೆದುಕೊಂಡಿದ್ದಾರೆ.