ನವದೆಹಲಿ: ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ಮತ್ತು ಗೂಗಲ್ ಸುಮಾರು 1 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿದ್ದು, ಏರ್ಟೆಲ್ನ ಶೇಕಡಾ 1.28ರಷ್ಟು ಪಾಲನ್ನು ಗೂಗಲ್ ತನ್ನದಾಗಿಸಿಕೊಂಡಿದೆ. ಈ ಒಪ್ಪಂದ ಹಲವು ವರ್ಷಗಳ ಅವಧಿಯದ್ದಾಗಿದ್ದು, ಈ ಮೂಲಕ ಭಾರತೀಯ ಡಿಜಿಟಲ್ ವಲಯದಲ್ಲಿ ಅತಿ ದೊಡ್ಡ ಸಂಸ್ಥೆಗಳಾದ ಏರ್‌ಟೆಲ್ ಮತ್ತು ಗೂಗಲ್ ಕೆಲವೊಂದು ವಿಚಾರಗಳಲ್ಲಿ ಸಹಭಾಗಿತ್ವ ಸಾಧಿಸಲಿವೆ.
ಗೂಗಲ್ ಸಂಸ್ಥೆ ಏರ್ಟೆಲ್ನಲ್ಲಿ 700 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಶೇಕಡಾ 1.28ರಷ್ಟು ಒಡೆತನದ ಪಾಲು ಗೂಗಲ್ಗೆ ಸೇರಲಿದೆ. ಇನ್ನುಳಿದ 300 ಮಿಲಿಯನ್ ಡಾಲರ್ ಅನ್ನು ಇತರ ವಾಣಿಜ್ಯ ಚಟುವಟಿಕೆಗಳ ಮೇಲೆ ಗೂಗಲ್ ಹೂಡಿಕೆ ಮಾಡಿದೆ. ಇದರಿಂದ ಏರ್‌ಟೆಲ್ ಮೇಲೆ ಒಟ್ಟು 1 ಬಿಲಿಯನ್ ಡಾಲರ್ ಅನ್ನು ಗೂಗಲ್ ಹೂಡಿಕೆ ಮಾಡಿದೆ.
ನೆಟ್‌ವರ್ಕ್, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಪೇಮೆಂಟ್ ಮುಂತಾದವುಗಳ ವಿಚಾರದಲ್ಲಿ ಭಾರತದ ಡಿಜಿಟಲ್ ಪರಿಸರವನ್ನು ಮತ್ತಷ್ಟು ವಿಸ್ತಾರಗೊಳಿಸಲು ನಾವು ಗೂಗಲ್ನೊಂದಿಗೆ ನಿಕಟವಾಗಿ ಕೆಲಸ ಮಾಡಲು ನಿರೀಕ್ಷಿಸುತ್ತಿದ್ದೇವೆ ಎಂದು ಭಾರ್ತಿ ಏರ್‌ಟೆಲ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ. ಈ ಒಪ್ಪಂದವು ಅಗತ್ಯ ನಿಯಂತ್ರಣಗಳನ್ನು ಹೊಂದಿರುತ್ತದೆ. ವಾಣಿಜ್ಯ ಒಪ್ಪಂದಗಳೂ ಆಗಿದ್ದು, ಏರ್‌ಟೆಲ್ ಮತ್ತು ಗೂಗಲ್ ಆ್ಯಂಡ್ರಾಯ್ಡ್ ಉತ್ಪನ್ನಗಳಲ್ಲಿ ಅಭಿವೃದ್ಧಿ ವಿಚಾರವಾಗಿ ಕೆಲಸ ಮಾಡುತ್ತವೆ ಎಂದು ತಿಳಿದು ಬಂದಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಏರ್‌ಟೆಲ್ ಈಗಾಗಲೇ ಗೂಗಲ್ನ 5ಜಿ ಅನ್ನು ಮತ್ತು ಕೆಲವೊಂದು ಸಾಫ್ಟ್ವೇರ್ಗಳನ್ನು ಬಳಸುತ್ತಿದ್ದು, ಈ ಒಪ್ಪಂದದಿಂದಾಗಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಮತ್ತಷ್ಟು ಹೊಸ ಯೋಜನೆಗಳನ್ನು ಮತ್ತು ಸೇವೆಗಳನ್ನು ತರುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಹಣಕಾಸು ಯೋಜನೆ: ನಿಮ್ಮ ಗುರಿಗಳನ್ನು ತಲುಪಲು ನೀವು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯಾ?