ನವದೆಹಲಿ: ಕೋವಿಡ್-19 ಮಹಾಮಾರಿಯಿಂದ ಜೀವ ಉಳಿಸಿಕೊಳ್ಳಲು ಜನ ಹೋರಾಡುತ್ತಿರುವ ಮಧ್ಯೆ ಭಾರತದ ಫಾರ್ಮಾ ಉದ್ಯಮ ಮೇಲ್ಮುಖದ ಬೆಳವಣಿಗೆ ಕಾಣುತ್ತಿದೆ. ಆಲ್ - ಇಂಡಿಯನ್ ಓರಿಜಿನ್ ಕೆಮಿಸ್ಟ್ಸ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಲಿಮಿಟೆಡ್ (All-Indian Origin Chemists & Distributors Ltd -AIOCD) ನೀಡಿರುವ ಮಾಹಿತಿಯ ಪ್ರಕಾರ, ಮುಂಬೈ ಮೂಲದ ಔಷಧ ಕಂಪನಿ ಗ್ಲೆನ್ಮಾರ್ಕ್ ಫಾರ್ಮಾಸ್ಯೂಟಿಕಲ್ ನ ಫಾಬಿಫ್ಲೂ ಅತಿ ಹೆಚ್ಚು ಮಾರಾಟವಾದ ಔಷಧಿಯಾಗಿದೆ. ಏಪ್ರಿಲ್ ತಿಂಗಳೊಂದರಲ್ಲಿಯೇ 351 ಕೋಟಿ ರೂಪಾಯಿ ಮೊತ್ತದ ಫಾಬಿಫ್ಲೂ ಮಾರಾಟವಾಗಿದೆ.
ಮಾರ್ಚ್ ತಿಂಗಳಲ್ಲಿ 48.3 ಕೋಟಿ ರೂಪಾಯಿ ಮೊತ್ತದ ಫಾಬಿಫ್ಲೂ ಮಾರಾಟವಾಗಿದ್ದರೆ, ಏಪ್ರಿಲ್ನಲ್ಲಿ ಇದರ ಮಾರಾಟ ಆರು ಪಟ್ಟು ಹೆಚ್ಚಾಗಿದೆ. ಜನವರಿಯಲ್ಲಿ 12.4 ಹಾಗೂ ಫೆಬ್ರವರಿಯಲ್ಲಿ 11.6 ಕೋಟಿ ರೂಪಾಯಿ ಮೊತ್ತದ ಫಾಬಿಫ್ಲೂ ಮಾರಾಟವಾಗಿತ್ತು ಎಂದು ಏಐಓಸಿಡಿ ಮಾಹಿತಿ ನೀಡಿದೆ.
ಏಐಓಸಿಡಿ ಇದು ಭಾರತದ 8.50 ಲಕ್ಷ ಔಷಧ ಮಾರಾಟಗಾರರು ಹಾಗೂ ತಯಾರಕರನ್ನು ಪ್ರತಿನಿಧಿಸುವ ಒಕ್ಕೂಟವಾಗಿದೆ. ಈ ಮುನ್ನ ಅತಿ ಹೆಚ್ಚು ಮಾರಾಟವಾಗುತ್ತಿದ್ದ ಜಿಂಕೊವಿಟ್ ಅನ್ನು ಹಿಂದಿಕ್ಕಿ ಫಾಬಿಫ್ಲೂ ದಾಖಲೆಯ ಮಾರಾಟವಾಗಿದೆ. ಫಾಬಿಫ್ಲೂ ಇದು ಇನ್ಫ್ಲೂಯೆಂಜಾ ನಿರೋಧಕ ಜಪಾನಿನ ಫಾವಿಪಿರಾವಿರ್ನ ದೇಶೀಯ ಔಷಧಿಯಾಗಿದೆ.
ಮುಂಬೈ ಮೂಲದ ಗ್ಲೆನ್ಮಾರ್ಕ್ ಕಂಪನಿಯು ಕಳೆದ ಜೂನ್ನಲ್ಲಿ ಫಾಬಿಫ್ಲೂ ತಯಾರಿಸಿ ಮಾರುಕಟ್ಟೆಗಿಳಿಸಿದ ನಂತರ 762 ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆಸಿದೆ. ಭಾರತೀಯ ಔಷಧ ನಿಯಂತ್ರಕ ಪ್ರಾಧಿಕಾರವು ಫಾಬಿಫ್ಲೂ ಔಷಧಿ ತಯಾರಿಕೆಗೆ ಕಳೆದ ಜೂನ್ನಲ್ಲಿ ಅನುಮತಿ ನೀಡಿತ್ತು. ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೋವಿಡ್-19 ರೋಗವನ್ನು ನಿವಾರಿಸಲು ಈ ಔಷಧಿ ಬಹಳಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ.
ಏಪ್ರಿಲ್ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಔಷಧಿಗಳು
- ಫಾಬಿಫ್ಲೂ (ವೈರಸ್ ನಿರೋಧಕ)
- ಮೊನೊಸೆಫ್ (ಆ್ಯಂಟಿಬಯಾಟಿಕ್)
- ಜಿಂಕೊವಿಟ್ (ವಿಟಮಿನ್)
- ಗ್ಲೈಕೊಮೆಟ್ (ಡಯಾಬಿಟೀಸ್)
- ಟೆಲ್ಮಾ (ಅಧಿಕ ರಕ್ತದೊತ್ತಡ)
ಔಷಧ ಸಂಗ್ರಹಿಸುತ್ತಿರುವ ಜನತೆ
ಭಾರತೀಯ ಔಷಧಿ ಮಾರುಕಟ್ಟೆಯ ಕುರಿತಾಗಿ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡ ಅಸೋಸಿಯೇಶನ್ ಆಫ್ ಹೆಲ್ತ್ ಕೇರ್ ಪ್ರೊವೈಡರ್ಸ್ನ ಪ್ರಧಾನ ನಿರ್ದೇಶಕ ಡಾ. ಗಿರಿಧರ ಗ್ಯಾನಿ, ಕೋವಿಡ್ ಚಿಕಿತ್ಸೆಯಲ್ಲಿ ಉಪಯೋಗವಾಗುವ ತುರ್ತು ಬಳಕೆಯ ಔಷಧಿಯ ಬೇಡಿಕೆ ಹೆಚ್ಚಾಗಿದೆ. ಆದರೆ ವೈದ್ಯರ ಸಲಹೆ ಪಡೆಯದೇ ಇಂಥ ಔಷಧಿಗಳನ್ನು ಬಳಸುವುದು ಸೂಕ್ತವಲ್ಲ ಎಂದು ಹೇಳುತ್ತಾರೆ.
"ಫಾಬಿಫ್ಲೂ ಇದೊಂದು ತುರ್ತು ಬಳಕೆಯ ಔಷಧಿಯಾಗಿದೆ. ಆದರೆ ಸದ್ಯದ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ, ಜನತೆ ವೈದ್ಯರ ಯಾವುದೇ ಚೀಟಿ ಇಲ್ಲದೇ ಇಂಥ ಔಷಧಿಗಳನ್ನು ಖರೀದಿಸಿ ಮನೆಯಲ್ಲಿ ಗುಡ್ಡೆ ಹಾಕಿ ಇಟ್ಟುಕೊಳ್ಳುತ್ತಿದ್ದಾರೆ." ಎಂದು ಡಾ. ಗ್ಯಾನಿ ತಿಳಿಸಿದರು.