ನವದೆಹಲಿ: ಹೊಸ ಅಭಿವೃದ್ಧಿ ಬ್ಯಾಂಕ್ (ಎನ್‌ಡಿಬಿ) ಖಾಸಗಿ ವಲಯದ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ಮತ್ತು ಹೆಚ್ಚು ನವೀನ ಹಣಕಾಸು ರಚನೆಗಳನ್ನು ಅನ್ವೇಷಿಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದ್ದಾರೆ.
ವಿಡಿಯೋ - ಕಾನ್ಫರೆನ್ಸ್ ಮೂಲಕ ಹೊಸ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ 6ನೇ ವಾರ್ಷಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮೂಲಸೌಕರ್ಯ ಹಣಕಾಸು ವ್ಯವಸ್ಥೆಯಲ್ಲಿ ಅಭಿವೃದ್ಧಿ ಹಣಕಾಸು ಸಂಸ್ಥೆಗಳ (ಡಿಎಫ್‌ಐ) ಪಾತ್ರವನ್ನು ಎತ್ತಿ ತಿಳಿಸಿದರು. ಆರಂಭಿಕ ಪಾವತಿಯೊಂದಿಗೆ ಭಾರತ ಹೊಸ ಡಿಎಫ್‌ಐ ಸ್ಥಾಪಿಸಲು ಹೊರಟಿದೆ. ಮುಂದಿನ ಮೂರು ವರ್ಷಗಳಲ್ಲಿ 69 ಬಿಲಿಯನ್ ಡಾಲರ್ ಸಾಲ ನೀಡುವ ಗುರಿಯೊಂದಿಗೆ ಸುಮಾರು 3 ಬಿಲಿಯನ್ ಡಾಲರ್ ಬಂಡವಾಳ ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ: ನಾಳೆಯಿಂದ ಹೊಸ ಆರ್ಥಿಕ ವರ್ಷಕ್ಕೆ ಏನೆಲ್ಲಾ ಬದಲಾಗಲಿದೆ?.. ನೀವು ತಿಳಿದಿರಬೇಕಾದ 6 ಪ್ರಮುಖ ಸಂಗತಿಗಳಿವು
ಹೆಚ್ಚಿನ ಫಲಿತಾಂಶ ಸಾಧಿಸಲು ಅಭಿವೃದ್ಧಿ ಆದ್ಯತೆಗಳನ್ನು ಹಂಚಿಕೊಳ್ಳುವ ಈ ಸಂಸ್ಥೆಗಳ ಜತೆಗೆ ಎನ್‌ಡಿಬಿ ತನ್ನ ಸಂಬಂಧ ವೃದ್ಧಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಖಾಸಗಿ ವಲಯದ ಭಾಗವಹಿಸುವಿಕೆ ಸುಲಭಗೊಳಿಸಲು, ಹೆಚ್ಚು ನವೀನ ಹಣಕಾಸು ರಚನೆ ಅನ್ವೇಷಿಸಲು, ಇತರ ಎಂಡಿಬಿಗಳ ಜತೆ ಸಹ - ಹಣಕಾಸು ಅವಕಾಶಗಳನ್ನು ಅನ್ವೇಷಿಸಲು, ಬ್ಯಾಂಕಿಂಗ್ ಯೋಜನೆಗಳ ಪೈಪ್‌ಲೈನ್ ಅಭಿವೃದ್ಧಿಪಡಿಸಲು ಮತ್ತು ಮೂಲಸೌಕರ್ಯಗಳ ಸುಸ್ಥಿರತೆ ಹೆಚ್ಚಿಸಲು ಪರಿಸರ ಮತ್ತು ಸಾಮಾಜಿಕ ಸುರಕ್ಷತೆಗಳನ್ನು ಉತ್ತೇಜಿಸಲು ಹಣಕಾಸು ಸಚಿವೆ ಎನ್‌ಡಿಬಿಯನ್ನು ಪ್ರೋತ್ಸಾಹಿಸಿದ್ದಾರೆ.
ಸಾಕಷ್ಟು ಬಂಡವಾಳ, ಉತ್ತಮ ಗುಣಮಟ್ಟದ ಆಡಳಿತ ಮತ್ತು ವಿವೇಕಯುತ ನಿರ್ವಹಣೆಯ ಮೂಲಕ ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳು ನಿಗದಿಪಡಿಸಿದ ರೇಟಿಂಗ್‌ಗಳನ್ನು ಎನ್‌ಡಿಬಿ ನಿರ್ವಹಿಸುವ ಮತ್ತು ಸುಧಾರಿಸುವ ಅಗತ್ಯವನ್ನು ಸೀತಾರಾಮನ್ ಪ್ರಸ್ತಾಪಿಸಿದ್ದಾರೆ.