ನವದೆಹಲಿ: ಜಿಎಸ್‌ಟಿ ನಷ್ಟ ಪರಿಹಾರದ ಕೊರತೆ ನೀಗಿಸಲು ಹಣಕಾಸು ಸಚಿವಾಲಯವು 12ನೇ ಸುತ್ತಿನ ಕಂತಿನಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 6,000 ಕೋಟಿ ರೂ. ಬಿಡುಗಡೆ ಮಾಡಿದೆ.
ವಿತ್ತ ಸಚಿವಾಲಯ ಬಿಡುಗಡೆ ಮಾಡಿದ ಹಣದಲ್ಲಿ 23 ರಾಜ್ಯಗಳಿಗೆ 5,516.60 ಕೋಟಿ ರೂ. ಹಾಗೂ 483.40 ಕೋಟಿ ರೂ. ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ (ದೆಹಲಿ, ಜಮ್ಮು & ಕಾಶ್ಮೀರ ಮತ್ತು ಪುದುಚೇರಿ) ಬಿಡುಗಡೆ ಮಾಡಲಾಗಿದೆ ಎಂದು ಜಿಎಸ್‌ಟಿ ಮಂಡಳಿ ತಿಳಿಸಿದೆ.
ಉಳಿದ ಐದು ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಜಿಎಸ್‌ಟಿ ಅನುಷ್ಠಾನದಿಂದ ಆದಾಯದಲ್ಲಿ ಅಂತರ ಇಲ್ಲ ಎಂದು ಹೇಳಿದೆ.
12 ಹಂತಗಳಲ್ಲಿ ಸಾಲ ಮಾಡಿದ ಕೇಂದ್ರ ಸರ್ಕಾರವು ಅಕ್ಟೋಬರ್ 23, ನವೆಂಬರ್ 2, ನವೆಂಬರ್ 9, ನವೆಂಬರ್ 23, ಡಿಸೆಂಬರ್ 1, ಡಿಸೆಂಬರ್ 7, ಡಿಸೆಂಬರ್ 14, ಡಿಸೆಂಬರ್ 21, ಡಿಸೆಂಬರ್ 28, ಜನವರಿ 1, ಜ.11 ಮತ್ತು 18ರಂದು ರಾಜ್ಯಗಳಿಗೆ ಹಣ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯಗಳಿಗೆ ₹ 60,066.36 ಕೋಟಿ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಗೆ 5,933.64 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಗೌಪ್ಯತಾ ನೀತಿ ಒಪ್ಪಲು ಆಗದಿದ್ದರೆ ವಾಟ್ಸ್ಆ್ಯಪ್ ಬಳಸಬೇಡಿ; ದೆಹಲಿ ಹೈಕೋರ್ಟ್
ಇಲ್ಲಿಯವರೆಗೆ ಒಟ್ಟು ಅಂದಾಜಿತ ಜಿಎಸ್‌ಟಿ ಪರಿಹಾರದ ಕೊರತೆಯ ಶೇ 65ರಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆಯಾಗಿದೆ. ಈ ಪೈಕಿ 65,582.96 ಕೋಟಿ ರೂ. ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಮತ್ತು 6,417.04 ಕೋಟಿ ರೂ. ವಿಧಾನಸಭಾ ಕ್ಷೇತ್ರವಾರು 3 ಯುಟಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇದುವರೆಗೆ 12 ಕಂತುಗಳಲ್ಲಿ ಬಿಡುಗಡೆಯಾದ ಒಟ್ಟು ಮೊತ್ತವು ಸರಾಸರಿ ಶೇ 4.70 ಬಡ್ಡಿದರದಲ್ಲಿ 72,000 ಕೋಟಿ ರೂ.ಯಷ್ಟಾಗಿದೆ. ನಿಬಂಧನೆಯಡಿ 28 ರಾಜ್ಯಗಳಿಗೆ 1,06,830 ಲಕ್ಷ ಕೋಟಿ ರೂ. (ಜಿಎಸ್‌ಡಿಪಿಯ ಶೇ 0.50) ಹೆಚ್ಚುವರಿ ಸಾಲ ಪಡೆಯಲು ಅನುಮತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.