ನವದೆಹಲಿ: ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಬ್ಯಾಂಕಿಂಗ್ ಪ್ರವೇಶಾತಿ ಪರೀಕ್ಷೆಗಳನ್ನು ನಡೆಸುವಂತೆ ಕಳೆದ ಹಲವು ವರ್ಷಗಳಿಂದ ಮನವಿ ಮಾಡಿಕೊಳ್ಳುತ್ತಿರುವ ವಿವಿಧ ರಾಜ್ಯಗಳ ಬೇಡಿಕೆಗೆ ವಿತ್ತ ಸಚಿವಾಲಯ ಸ್ಪಂದಿಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಈ ಕುರಿತು ಮಾತನಾಡಿ, ಪ್ರಾದೇಶಿಕ ಸ್ಥಳೀಯ ಬ್ಯಾಂಕ್ಗಳು (ಆರ್ಆರ್ಬಿ) ಬ್ಯಾಂಕಿಂಗ್ ಪ್ರವೇಶಾತಿ ಪರೀಕ್ಷೆಗಳನ್ನು 13 ಸ್ಥಳೀಯ ಭಾಷೆಗಳಲ್ಲಿ ನಡೆಸಲಿದೆ. ಇದರ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್ ಕೂಡ ಇರಲಿದೆ ಎಂದರು.
ಕಳೆದ ಹಲವು ವರ್ಷಗಳಿಂದ ವಿವಿಧ ರಾಜ್ಯಗಳು ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗೆ ಅನುವು ಮಾಡಿಕೊಡುವಂತೆ ಕೇಂದ್ರದ ಮೇಲೆ ಒತ್ತಡ ತರುತ್ತಿದ್ದವು. ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ರಾಜ್ಯ ಮುಖಂಡರು ಆಗಾಗೆ ಮನವಿ ಸಲ್ಲಿಸಿದ್ದರು.
ಮುಂದಿನ ಎಲ್ಲ ಬ್ಯಾಂಕಿಂಗ್ ಪರೀಕ್ಷೆಗಳು ಕನ್ನಡ, ಬೆಂಗಾಲಿ, ಗುಜರಾತಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಓಡಿಶಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ನಡೆಯಲಿವೆ.