ಕೋಲ್ಕತ್ತಾ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶದ ನಿಯಮಿತ ಉತ್ಪನ್ನಗಳ ಬೇಡಿಕೆ ಕ್ಷೀಣಿಸುತ್ತಿದ್ದು, ಗ್ರಾಮೀಣ ಪ್ರದೇಶದ ಹಲವು ಉದ್ಯಮಿಗಳು ಮುಖಗವಸು (ಫೇಸ್ ಮಾಸ್ಕ್) ತಯಾರಿಕೆಗೆ ಮುಂದಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಟಾರ್ಟ್ಅಪ್ ಗ್ರಾಮ ಉದ್ಯಮಶೀಲತೆ ಕಾರ್ಯಕ್ರಮದ (ಎಸ್‌ವಿಇಪಿ) ಅಡಿಯಲ್ಲಿ ಸುಮಾರು 500 ಗ್ರಾಮೀಣ ಉದ್ಯಮಿಗಳು ಈವರೆಗೆ 3.5 ಲಕ್ಷ ಮಾಸ್ಕ್ಗಳನ್ನು ತಯಾರಿಸಿ ಮಾರಾಟ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಸಿಬ್ಬಂದಿ, ಪೊಲೀಸರು, ಮಾಧ್ಯಮ ಸಿಬ್ಬಂದಿ ಮತ್ತು ಸ್ವಚ್ಛತಾ ಕಾರ್ಮಿಕರಿಗಾಗಿ ಗ್ರಾಮೀಣ ಭಾಗದ ಮಾಸ್ಕ್ ಉದ್ಯಮಿಗಳು, ನಿತ್ಯ ಸುಮಾರು 2,500 ಮುಖಗವಸು ತಯಾರಿಸುತ್ತಿದ್ದಾರೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ) ಮತ್ತು ಎಸ್‌ವಿಇಪಿ ಯೋಜನೆ ಅಡಿಯಲ್ಲಿ ತರಬೇತಿ ಪಡೆದ ಉದ್ಯಮಿಗಳು ಈವರೆಗೆ ರಾಜ್ಯದಲ್ಲಿ 49,000 ಮುಖಗವಸು ಮಾರಾಟ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಹೊರತಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್ ಮತ್ತು ಹರಿಯಾಣದ ಗ್ರಾಮೀಣ ಪ್ರದೇಶಗಳಲ್ಲಿ ಈ ಕಾರ್ಯಕ್ರಮ ಸಕ್ರಿಯವಾಗಿದೆ ಎಂದು ತಿಳಿಸಿದ್ದಾರೆ.
ಮಾಸ್ಕ್ಗಳನ್ನು ಆರೋಗ್ಯಕರವಾದ ವಾತಾವರಣ ಮತ್ತು ಜಿಲ್ಲಾ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತಯಾರಿಸಲಾಗುತ್ತದೆ. ಬದಲಾಗುತ್ತಿರುವ ಪರಿಸರಕ್ಕೆ ಮತ್ತು ಹೊಂದಿಕೊಳ್ಳಲು ಅವರಿಗೆ ತರಬೇತಿ ನೀಡಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ತರಬೇತಿ ಕಾರ್ಯ ಯಶಸ್ವಿಯಾಗಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ಎಸ್‌ವಿಇಪಿ-ಇಡಿಐ ಯೋಜನಾ ಮುಖ್ಯಸ್ಥ ರಾಜೇಶ್ ಗುಪ್ತಾ ಹೇಳಿದರು.