ನವದೆಹಲಿ : ಷೇರುಪೇಟೆಯಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಎಲ್‌ಐಸಿಯಿಂದ ಮತ್ತೊಂದು ಬೆಳವಣೆಗೆ ವರದಿಯಾಗಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಎಲ್‌ಐಸಿಯ ಐಪಿಒನಲ್ಲಿ ಶೇ.20ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡುವ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದೆ.
ದೇಶದ ಅತಿದೊಡ್ಡ ವಿಮಾ ಸಂಸ್ಥೆಯ ಹೂಡಿಕೆಯನ್ನು ಸುಲಭಗೊಳಿಸುವ ನಿರ್ಧಾರಕ್ಕೆ ಕೇಂದ್ರ ಸಚಿವ ಸಂಪುಟವು ಕಳೆದ ತಿಂಗಳು ಅನುಮೋದನೆ ನೀಡಿತ್ತು. ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೂಲಕ ಷೇರುಪೇಟೆಗೆ ಬರಲು ಸರ್ಕಾರಿ ಒಡೆತನದ ಎಲ್‌ಐಸಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಆದರೆ, ರಷ್ಯಾ-ಉಕ್ರೇನ್ ಭೀಕರ ಯುದ್ಧದ ಕಾರಣದಿಂದ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಬೃಹತ್ ಏರಿಳಿತಗಳು ಉಂಟಾಗುತ್ತಿವೆ. ವಿದೇಶಿ ಹೊರ ಹರಿವು ದೊಡ್ಡ ಪ್ರಮಾಣದಲ್ಲಿದೆ. ಇದರಿಂದಾಗಿ ಗರಿಷ್ಠ ಮಟ್ಟದ ಮಾರುಕಟ್ಟೆ ಮೌಲ್ಯ ಪಡೆಯಲು ಎದುರು ನೋಡುತ್ತಿದ್ದ ಎಲ್‌ಐಸಿ, ಸದ್ಯದ ಮಟ್ಟಿಗೆ ಐಪಿಒ ಮುಂದೂಡುವ ಸಾಧ್ಯತೆಗಳು ಇವೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಜೀವ ವಿಮಾ ನಿಗಮದಲ್ಲಿನ ಶೇ.5ರಷ್ಟು ಪಾಲನ್ನು ಮಾರಾಟ ಮಾಡುವ ಮೂಲಕ 63,000 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಇದನ್ನೂ ಓದಿ: ಎಲ್‌ಐಸಿ ಐಪಿಒ: ಪಾಲಿಸಿದಾರರು ಹೂಡಿಕೆಗೂ ಮುನ್ನ ತಿಳಿಯಬೇಕಾದ ವಿಷಯಗಳಿವು...