ನವದೆಹಲಿ : ತೆರಿಗೆ ವಂಚನೆ ಎಸಗುತ್ತಿದ್ದ ರಫ್ತುದಾರರಿಗೆ ಸಂಬಂಧಿಸಿದ ಅಚ್ಚರಿಯ ದತ್ತಾಂಶವನ್ನು ತನಿಖಾ ತಂಡ, ಆದಾಯ ತೆರಿಗೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
1,875 ಕೋಟಿ ರೂ. ಮೌಲ್ಯದಷ್ಟು ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ (ಇಂಟಿಗ್ರೇಟೆಡ್ ಜಿಎಸ್‌ಟಿ) ಮರುಪಾವತಿಯಲ್ಲಿ ವಂಚನೆ ಎಸಗಿದ 1,377 ರಫ್ತುದಾರರು, ವ್ಯವಹಾರದ ಸ್ಥಳದಲ್ಲಿ ಆ ಹಣ ಹುದುಗಿಸಿದ್ದಾರೆ ಎಂದಿದೆ. 'ಅಪಾಯಕಾರಿ ರಫ್ತುದಾರರ' ಪಟ್ಟಿಯಲ್ಲಿ ಸ್ಟಾರ್ ರಫ್ತುದಾರರಾಗಿ ಮಾನ್ಯತೆ ಪಡೆದ 7 ದೊಡ್ಡ ಘಟಕಗಳು ಸೇರಿವೆ. ಇದಲ್ಲದೆ ತ್ರಿ ಸ್ಟಾರ್ ರಫ್ತುದಾರರ ಮೇಲೂ ಪ್ರತಿಕೂಲ ವರದಿಗಳು ಬಂದಿವೆ.
ಈವರೆಗೂ 7,516 ರಫ್ತುದಾರರು ಅಪಾಯಕಾರಿ ರಫ್ತುದಾರರ ಪಟ್ಟಿಯಲ್ಲಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಮೂಲಗಳು ತಿಳಿಸಿವೆ. 2,830 ಅಪಾಯಕಾರಿ ರಫ್ತುದಾರರಿಗೆ ಸಂಬಂಧಿಸಿದಂತೆ 1,363 ಕೋಟಿ ರೂ. ಐಜಿಎಸ್ಟಿ ಮರುಪಾವತಿ/ನ್ಯೂನತೆಯನ್ನು ಅಮಾನತುಗೊಳಿಸಲಾಗಿದೆ. 2,197 ಅಪಾಯಕಾರಿ ರಫ್ತುದಾರರಿಗೆ ಸಂಬಂಧ ಪ್ರತಿಕೂಲ ವರದಿಗಳನ್ನು ಸಹ ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಸ್ಟಮ್ಸ್, ಜಿಎಸ್‌ಟಿ, ಆದಾಯ ತೆರಿಗೆ ಮತ್ತು ಡಿಜಿಎಫ್ಟಿ ದತ್ತಾಂಶ ಆಧಾರದ ಮೇಲೆ ನಿರ್ದಿಷ್ಟ ಅಪಾಯ ಸೂಚಕಗಳ ಆಧಾರದ ಮೇಲೆ ರಫ್ತುದಾರರನ್ನು "ಅಪಾಯಕಾರಿ" ಎಂದು ಗುರುತಿಸಲಾಗಿದೆ.