ಭೋಪಾಲ್: ಮಧ್ಯಪ್ರದೇಶದ ಸಿಎಂ ಕಮಲ್‌ನಾಥ್ ನೇತೃತ್ವದ ಸರ್ಕಾರದ ಹಣಕಾಸು ಸಚಿವ ತರುಣ್ ಭಾನೋಟ್ ಅವರು 2019-20ನೇ ಸಾಲಿನ ₹ 2.33 ಲಕ್ಷ ಕೋಟಿಯ ರಾಜ್ಯ ಬಜೆಟ್ ಮಂಡಿಸಿದ್ದಾರೆ.
ಕಳೆದ ಏಳು ತಿಂಗಳಿಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದು, ವಿಧಾನಸಭಾ ಚುನಾವಣೆಗೂ ಮುನ್ನ ತಳೆದಿದ್ದ ಮೃದು ಹಿಂದುತ್ವದ ಧೋರಣೆಯನ್ನು ಬಜೆಟ್ನಲ್ಲಿಯೂ ಮುಂದುವರಿಸಿದೆ. ಗೋವುಗಳ ಸಂರಕ್ಷಣೆಗೆ ₹ 132 ಕೋಟಿ ಮೀಸಲಿಟ್ಟಿದ್ದು, ಗೋಶಾಲೆ ನಿರ್ವಹಣೆ ಭತ್ಯೆಯನ್ನು ₹ 4 ರಿಂದ ₹ 20ಕ್ಕೆ ಏರಿಕೆ ಮಾಡಿದ್ದಾರೆ. ಇದರ ಜೊತೆಗೆ ರಾಜ್ಯ ವಕ್ಫ್ ಮಂಡಳಿ ಹಾಗೂ ಹಜ್ ಸಮಿತಿಯ ಅನುದಾನ ಹೆಚ್ಚಿಸಿ ಸರ್ಕಾರ ಸಮತೋಲನದ ನಡೆ ಅನುಸರಿಸಿದೆ.
ಗೋವುಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂಬ ಈ ಹಿಂದಿನ ಭರವಸೆಯನ್ನೇ ಪುನರುಚ್ಚರಿಸಿ, ಬಜೆಟ್ನಲ್ಲಿ 1,000 ಗೋ ಶಾಲೆಗಳ ಆಶ್ರಯಕ್ಕೆ ₹ 132 ಕೋಟಿ ತೆಗೆದಿರಿಸಿದ್ದಾರೆ. ರಾಜ್ಯ ನಿಧಿ ಬೆಂಬಲಿತ ಒಮ್ಮುಖ ಮಾದರಿ, ವಾಣಿಜ್ಯ ಉದ್ದೇಶಗಳ ಕಾರ್ಪೊರೇಟ್ ಹಾಗೂ ದೇವಾಲಯ ಮತ್ತು ಅವುಗಳಿಗೆ ಸಂಬಂಧಿಸಿದ ಭೂಮಿ ಒಳಗೊಂಡಂತೆ ಈ ಮೂರು ಮಾದರಿಯಲ್ಲಿ ಗೋಶಾಲೆ ನಿರ್ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸರ್ಕಾರದಡಿ ನೋಂದಾಯಿತ ದೇವಾಲಯಗಳಲ್ಲಿ ಕೆಲಸ ಮಾಡುವ ಪುರೋಹಿತರ ಗೌರವ ಧನವನ್ನು ಮೂರು ಪಟ್ಟು ಹೆಚ್ಚಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ಶ್ರೀರಾಮ ಮಾರ್ಗ ಹಾದಿಯನ್ನು ಅಭಿವೃದ್ಧಿಪಡಿಸಲು ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಮಧ್ಯಪ್ರದೇಶದ ಕಾಡುಗಳಲ್ಲಿ ಶ್ರೀರಾಮ ವನವಾಸ ಸಾಗಿದ ಪೌರಾಣಿಕ ಮಾರ್ಗಗಳನ್ನು ಪತ್ತೆಹಚ್ಚಿ ಅವುಗಳನ್ನು ಅಭಿವೃದ್ಧಿಪಡಿಸುವುದು ತನ್ನ ಚುನಾವಣೆಯ ಪ್ರಣಾಳಿಕೆ ಆಗಿತ್ತು.