ನವದೆಹಲಿ: ಆರೋಗ್ಯ, ಗೌಪ್ಯತೆ ಪ್ರೇರಿತವಾದ ನಡವಳಿಕೆಯಲ್ಲಿ ಭಾರತೀಯರು ಮೂಲ ಬದಲಾವಣೆಗೆ ಒಳಗಾಗುತ್ತಿದ್ದಾರೆ ಎಂದು ಸಲಹಾ ಸಂಸ್ಥೆ ಇವೈ ವರದಿ ತಿಳಿಸಿದೆ.
ದೇಶದ ಜನಸಂಖ್ಯೆಯ ಸುಮಾರು 70 ಪ್ರತಿಶತದಷ್ಟು ಜನರು, "ಭಯ ಮತ್ತು ಆತಂಕ"ದೊಂದಿಗೆ ಹಿಡಿತ ಸಾಧಿಸುತ್ತಿದ್ದಾರೆ ಎಂದು ಇವೈ ನಡೆಸಿದ 'ಲೈಫ್ ಇನ್ ಎ ಪ್ಯಾಂಡೆಮಿಕ್' ಅಧ್ಯಯನದಲ್ಲಿ ತಿಳಿದುಬಂದಿದೆ.
ಇನ್ನು ಸಾಂಕ್ರಾಮಿಕ ರೋಗದಿಂದಾಗಿ, ಜನರು ಆರೋಗ್ಯ ಪ್ರಜ್ಞೆಯನ್ನ ಹೊಂದುತ್ತಿದ್ದಾರೆ. ಇನ್ನು ಅಧ್ಯಯನದಲ್ಲಿ ಪ್ರತಿಕ್ರಿಯೆ ನೀಡಿದ 80 ಪ್ರತಿಶತದಷ್ಟು ಜನರು ತಮ್ಮ ಆಹಾರ ಪದ್ಧತಿಯಲ್ಲಿ ಸುಧಾರಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ. 56 ಪ್ರತಿಶತದಷ್ಟು ಜನರು ಮನೆಕೆಲಸದಲ್ಲಿ ತೊಡಗಿದ್ದು, 33 ಪ್ರತಿಶತದಷ್ಟು ಜನರು ವರ್ಕೌಟ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ದೇಶದ ವಯಸ್ಕ ಜನಸಂಖ್ಯೆಯಲ್ಲಿ 2,033 ಮಂದಿಯನ್ನು ಈ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಸಾಂಕ್ರಾಮಿಕ ರೋಗ ಕೋವಿಡ್ ಸಂದರ್ಭದಲ್ಲಿ ಶೇಕಡಾ 54.5ರಷ್ಟು ಮಂದಿ ಎಂದಿನಂತೆ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದು, 40 ಪ್ರತಿಶತದಷ್ಟು ಜನರು ಮನೆಯಿಂದ ಕೆಲಸ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
"ಫಿಟ್‌ನೆಸ್, ಶಿಕ್ಷಣ ಮತ್ತು ಬ್ಯಾಂಕಿಂಗ್, ದಿನಸಿ ಮತ್ತು ಬಿಲ್ ಪಾವತಿಗಳಂತಹ ಉಪಯುಕ್ತತೆಗಳಿಗಾಗಿ ಆನ್‌ಲೈನ್ ಸೇವೆಗಳನ್ನು ಹೆಚ್ಚಾಗಿ ಈ ಸಂದರ್ಭದಲ್ಲಿ ಬಳಸಲಾಗುತ್ತಿದೆ ಎಂಬ ಅಂಶವೂ ಅಧ್ಯಯನದಿಂದ ತಿಳಿದುಬಂದಿದೆ.
ಆವಿಷ್ಕಾರಗಳ ಕುರಿತು ಪ್ರತಿಕ್ರಿಯಿಸಿದ ಇವೈ ಇಂಡಿಯಾದ ಪಾಲುದಾರ ಶಶಾಂಕ್ ಶ್ವೇತ್ ಅವರು, ಸಾಂಪ್ರದಾಯಿಕವಾಗಿ ಆಫ್‌ಲೈನ್ ವಿಭಾಗಗಳಲ್ಲಿಯೂ ಆನ್‌ಲೈನ್ ಬಳಕೆ ಮಾಡುತ್ತಿರುವ ಮಟ್ಟಿಗೆ ಬದಲಾವಣೆಯಾಗಿದೆ ಎಂದು ಹೇಳಿದರು.
ಅಷ್ಟೇ ಅಲ್ಲದೇ, ಇಂತಹ ಪ್ರತಿಕೂಲ ಪರಿಸ್ಥಿತಿ ಗೆಲ್ಲಲು, ಕಂಪನಿಗಳು ಇಂದಿನ ವಿಶಿಷ್ಟ ಸಂದರ್ಭಕ್ಕೆ ತಕ್ಕಂತೆ ತಂತ್ರಗಳನ್ನು ರೂಪಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.