ನವದೆಹಲಿ: ಬಜೆಟ್ನಲ್ಲಿ ಘೋಷಿಸಲಾದ 3ನೇ ಹಂತದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ (ಪಿಎಂಜಿಎಸ್‌ವೈ) 1.25 ಲಕ್ಷ ಕಿ.ಮೀ. ರಸ್ತೆ ಉನ್ನತೀಕರಣಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಒಪ್ಪಿಗೆ ನೀಡಿದೆ.
ಗ್ರಾಮೀಣ ಭಾಗದ ಆರ್ಥಿಕ-ಸಾಮಾಜಿಕ ಪರಿಸ್ಥಿತಿಯಲ್ಲಿ ಗಣನೀಯ ಪ್ರಮಾಣದ ಅಭಿವೃದ್ಧಿ ಕಂಡು ಬರುತ್ತಿದೆ. ಹೀಗಾಗಿ, ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಜಾಲವನ್ನು ಉನ್ನತೀಕರಣಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ನಲ್ಲಿ ಹೇಳಿದ್ದರು. ಇದಕ್ಕಾಗಿ ₹ 80,250 ಕೋಟಿ ವಿನಿಯೋಗಿಸಲಾಗುವುದು ಎಂದು ಕೂಡ ಘೋಷಿಸಿದ್ದರು.
ಪಿಎಂಜಿಎಸ್‌ವೈ- 3ರಡಿ ಮುಂದಿನ 5 ವರ್ಷಗಳಲ್ಲಿ 1,25,000 ಕಿ.ಮೀ. ರಸ್ತೆ ಉನ್ನತೀಕರಣಕ್ಕಾಗಿ ₹ 80,250 ಕೋಟಿ ವಿನಿಯೋಗಿಸಲು ಸಿಸಿಇಎ ಅನುಮೋದನೆ ನೀಡಿದೆ. ಈ ಮೂಲಕ ಸೀತಾರಾಮನ್ ಅವರ ಪ್ರಥಮ ಬಜೆಟ್ನ ಮೊದಲ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.