ನವದೆಹಲಿ: ಲಂಚ ಪ್ರಕರಣದಲ್ಲಿ ಭಾರತದ ಆಹಾರ ನಿಗಮದ (ಎಫ್‌ಸಿಐ) ನಾಲ್ವರು ಅಧಿಕಾರಿಗಳನ್ನು ಬಂಧಿಸಿ, ಶೋಧಿಸಿದಾಗ 3.01 ಕೋಟಿ ರೂ. ಪತ್ತೆಯಾಗಿದೆ.
ಒಂದು ಲಕ್ಷ ರೂ. ಲಂಚ ಪ್ರಕರಣದಲ್ಲಿ ಏಜೆನ್ಸಿ ವಿಭಾಗೀಯ ವ್ಯವಸ್ಥಾಪಕ ಹರೀಶ್ ಹಿನೋನಿಯಾ, ವಿಭಾಗೀಯ ವ್ಯವಸ್ಥಾಪಕ ಅರುಣ್ ಶ್ರೀವಾಸ್ತವ, ವ್ಯವಸ್ಥಾಪಕ (ಖಾತೆಗಳು), ಮೋಹನ್ ಪ್ಯಾರೇಟ್, ವ್ಯವಸ್ಥಾಪಕ (ಭದ್ರತೆ) ಮತ್ತು ಎಫ್‌ಸಿಐನ ಸಹಾಯಕ (ಗ್ರೇಡ್ -1) ಕಿಶೋರ್ ಮೀನಾ ಅವರನ್ನು ಬಂಧಿಸಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಭೋಪಾಲ್‌ನ ಆರು ಸ್ಥಳಗಳಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಅಧಿಕೃತ ಮತ್ತು ವಸತಿಗಳಲ್ಲಿ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ ಎಂದು ಸಿಬಿಐ ಅಧಿಕಾರಿ ತಿಳಿಸಿದ್ದಾರೆ.
ಶೋಧಕಾರ್ಯದ ವೇಳೆ 3.01 ಕೋಟಿ ರೂ. ನಗದು, 387 ಗ್ರಾಂ. ಚಿನ್ನಾಭರಣ ಮತ್ತು 670 ಗ್ರಾಂ. ಬೆಳ್ಳಿಯ ವಸ್ತುಗಳು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆಯಾದ ನಗದು ಮೊತ್ತವನ್ನು ವಿವಿಧ ಲಕೋಟೆಗಳಲ್ಲಿ ಇರಿಸಲಾಗಿದೆ. ಕೆಲವು ಕಟ್ಟುಗಳನ್ನು ಗುರುತಿಸಲಾಗಿದ್ದು, ಹೆಸರು, ದಿನಾಂಕ ಮತ್ತು ಮೊತ್ತಗಳೊಂದಿಗೆ ಬರೆಯಲಾಗಿದೆ.
ಭಾರಿ ಮೊತ್ತದ ಹಣವನ್ನು ಸುರಕ್ಷತಾ ವಾಲ್ಟ್, ಕಪಾಟಿನಲ್ಲಿ ಇರಿಸಲಾಗಿತ್ತು. ನೋಟು ಎಣಿಕೆಯ ಯಂತ್ರವೂ ಕಂಡು ಬಂದಿದೆ. ಪಡೆದ ನಗದು ಮೊತ್ತ, ದಿನಾಂಕ, ಹೆಸರು, ಇತ್ಯಾದಿ ಸೇರಿದಂತೆ ಆಪಾದಿತ ದಾಖಲೆಗಳನ್ನು ಒಳಗೊಂಡ ಡೈರಿ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಕಂಪನಿಯ ಬಾಕಿ ಇರುವ ಬಿಲ್‌ಗಳನ್ನು ಬಿಡುಗಡೆ ಮಾಡಲು 1.5 ಲಕ್ಷ ರೂ. ಲಂಚ ನೀಡುವಂತೆ ಭೋಪಾಲ್‌ನ ಎಫ್‌ಸಿಐ ವಿಭಾಗೀಯ ಕಚೇರಿಯ ವ್ಯವಸ್ಥಾಪಕ (ಅಕೌಂಟ್ಸ್) ಆಗಿ ನೇಮಕಗೊಂಡಿರುವ ಶ್ರೀವಾತ್ಸವ ವಿರುದ್ಧ ಸಂತ್ರಸ್ತರೊಬ್ಬರು ದೂರು ದಾಖಲಿಸಿದ್ದರು.
ದೂರುದಾರರಿಂದ ಒಂದು ಲಕ್ಷ ರೂಪಾಯಿ ಲಂಚ ಕೋರಿ, ಅದನ್ನು ಸ್ವೀಕರಿಸುವಾಗಲೇ ಆರೋಪಿಗಳನ್ನು ಸಿಬಿಐ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದರು.