ನವದೆಹಲಿ: ಪಾಕಿಸ್ತಾನದ ಉಗ್ರರ ಅಡುಗುತಾಣ ಬಾಲಾಕೋಟ್ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ಏರ್ ಸ್ಟ್ರೈಕ್ ಅನ್ನು ರಾಜಕೀಯ ಮುನ್ನೆಲೆಗೆ ತಂದು ದೇಶಪ್ರೇಮ ಮೆರೆದು ಮತ್ತೆ ಅಧಿಕಾರಕ್ಕೆ ಬಂದ ಎನ್ಡಿಎ, ಈ ಹಿಂದೆ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಇಂದು ವಿತ್ತ ಸಚಿವರಾಗಿ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ, 2019-20ರ ಮುಂಗಡ ಪತ್ರದಲ್ಲಿ ರಕ್ಷಣಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವರು ಎಂಬ ನಿರೀಕ್ಷೆ ಇದೆ.
ರಕ್ಷಣಾ ವಲಯಕ್ಕೆ ಭಾರತ ತೆಗದಿರಿಸಿದ ಬಜೆಟ್
2019ರ ಫೆಬ್ರವರಿಯಲ್ಲಿ ಗೋಯಲ್ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ₹ 3 ಲಕ್ಷ ಕೋಟಿ ಮೀಸಲಿಡಲಾಗಿತ್ತು. ಇದು ಈ ಹಿಂದಿನ ಬಜೆಟ್ಗಿಂತ ಶೇ 6.96ರಷ್ಟು ಅಧಿಕವಾಗಿದೆ. ಒಟ್ಟು ಬಜೆಟ್‌ನಲ್ಲಿ ಭದ್ರತೆಗೆ ಸಿಂಹ ಪಾಲು ನೀಡಿದ್ದರೂ ಒಟ್ಟು ಜಿಡಿಪಿಯಲ್ಲಿ ಶೇ 2.5ಕ್ಕಿಂತಲೂ ಕಡಿಮೆ ಇದೆ. ಗಡಿಯಲ್ಲಿ ಸದಾ ತಕರಾರು ತೆಗೆಯುವ ನೆರೆಯ ಚೀನಾ (ಶೇ 2.5ರಷ್ಟು) ಹಾಗೂ ಪಾಕಿಸ್ತಾನಕ್ಕಿಂತಲೂ (ಶೇ 3.5ರಷ್ಟು) ಕಡಿಮೆ ಇದೆ.
ಹಳೆಯ ಶಸ್ತ್ರಾಸ್ತ್ರಗಳ ಬದಲಿಗೆ ಆಧುನಿಕ ಶಸ್ತ್ರಾಸ್ತ್ರಗಳ ಖರೀದಿಗೆ ಒತ್ತು
ಪ್ರತಿ ಬಜೆಟ್‌ನಲ್ಲಿ ರಕ್ಷಣೆಗೆ ಸಿಂಹಪಾಲು ಅನುದಾನ ಮೀಸಲಿರಿಸಿಕೊಂಡು ಬರಲಾಗುತ್ತಿದೆ. ಸೇನಾ ಪರಿಕರಗಳ ನಿರ್ವಹಣೆ, ರಷ್ಯಾ ನಿರ್ಮಿತ ಹಳೆಯ ಶಸ್ತ್ರಾಸ್ತ್ರಗಳ ಬದಲಿಗೆ ಆಧುನಿಕ ಶಸ್ತ್ರಾಸ್ತ್ರಗಳ ಖರೀದಿ, ಹೆಲಿಕಾಪ್ಟರ್, ಸಮರ ನೌಕೆ, ಜಲಾಂತರ್ಗಾಮಿಗಳ ಸ್ವಾಧೀನ, ಕ್ಷಿಪಣಿ ಖರೀದಿ ಸೇರಿದಂತೆ ಗಡಿಯಲ್ಲಿ ಮೂಲಸೌಕರ್ಯಗಳಿಗೆ ಹೆಚ್ಚಿನ ಮೊತ್ತದ ಅವಶ್ಯಕತೆ ಇದೆ ಎಂಬ ರಕ್ಷಣಾ ಸಚಿವಾಲಯದ ಬೇಡಿಕೆಗಳನ್ನು ಅರಿತಿರುವ ನಿರ್ಮಲಾ ಸೀತಾರಾಮನ್ ಅವರು, ಈ ಬಜೆಟ್‌ನಲ್ಲಿ ಪೂರೈಸಬಹುದು.
ಏಕಶ್ರೇಣಿ ಏಕ ವೇತನ (ಒಆರ್ಒಪಿ) ಯೋಜನೆ, 7ನೇ ವೇತನ ಆಯೋಗದ ಅನ್ವಯ ಸಂಬಳ ಏರಿಕೆ, ಪಿಂಚಣಿ ಮೊತ್ತ ಪಾವತಿ ಮತ್ತು ಅರಿಯರ್ಸ್ಗೆ ಈ ಬಜೆಟ್‌ನಲ್ಲಿ ಅನುದಾನ ತೆಗದಿರಿಸಬೇಕಿದೆ.
ರಕ್ಷಣಾ ಭದ್ರತಾ ಪ್ರತಿಸ್ಪರ್ಧಿ ಚೀನಾ
ಅಮೆರಿಕದ ಬಳಿಕ ಸೇನಾ ವೆಚ್ಚದಲ್ಲಿ 2ನೇ ಸ್ಥಾನದಲ್ಲಿರುವ ಚೀನಾ, 2019ರ ಸಾಲಿನಲ್ಲಿ ರಕ್ಷಣಾ ಬಜೆಟ್ ಶೇ 7.5ರಷ್ಟುಏರಿಕೆ ಮಾಡಿದೆ. 2019ರ ರಕ್ಷಣಾ ಬಜೆಟ್ ಗಾತ್ರ ₹ 12.61 ಲಕ್ಷ ಕೋಟಿ ಆಗಿದ್ದು, 2015ರಿಂದ ಸೇನಾ ಬಜೆಟ್‌ನ ಗಾತ್ರ ಏರಿಸಿಕೊಂಡು ಬರುತ್ತಿದೆ. ಭಾರತದ ರಕ್ಷಣಾ ಬಜೆಟ್‌ನ ಗಾತ್ರ ₹ 3.18 ಲಕ್ಷ ಕೋಟಿಗೆ ಹೋಲಿಸಿದರೆ, ನಾಲ್ಕು ಪಟ್ಟು ಅಧಿಕವಾಗಿದೆ.